ಮುಂಬೈ[ಜು.07]: ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ಡಿಯೋರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಲು ಮೂರು ಹಿರಿಯ ಸದಸ್ಯರ ಸಮಿತಿ ರಚಿಸುವಂತೆ ಸಲಹೆ ನೀಡಿದ್ದಾರೆ. ಮಿಲಿಂದ್ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

ಮತ್ತೋರ್ವ ಪ್ರಮುಖ ಕೈ ಮುಖಂಡ ರಾಜೀನಾಮೆ : ಹುದ್ದೆಗೆ ಗುಡ್ ಬೈ

ಜೂನ್ 26ರಂದು ರಾಹುಲ್ ಗಾಂಧಿಯನ್ನು ಭೇಟಿಯಾಗಿ ಮರಳಿದ್ದ ಬಳಿಕ ಮಿಲಿಂದ್ ರಾಜೀನಾಮೆ ಮಾತುಗಳನ್ನಾಡಿದ್ದರು. ಆದರೀಗ ಡಿಯೋರಾ ಕಾರ್ಯಾಲಯದಿಂದ ಜಾರಿಗೊಳಿಸಲಾದ ಪ್ರಕಟಣೆಯಲ್ಲಿ 'ರಾಜೀನಾಮೆ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಗಮನಕ್ಕೆ ತರಲಾಗಿದೆ' ಎಂದು ತಿಳಿಸಿದ್ದಾರೆ. 

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಮಿಲಿಂದ್ ಜುಲೈ 4ರಂದು ರಾಹುಲ್ ಗಾಂಧಿಯವರ ಮುಂಬೈ ಪ್ರವಾಸವನ್ನು ಆಯೋಜಿಸಿದ್ದರು ಎಂಬುವುದು ಗಮನಾರ್ಹ. ಲೋಕಸಭಾ ಚುನಾವಣೆಯ ಕೇವಲ ಒಂದು ತಿಂಗಳ ಮೊದಲು ಮಿಲಿಂದ್ ಡಿಯೋರಾರನ್ನು ಮುಂಬೈ ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಹೀಗಿರುವಾಗ ಚುನಾವಣೆಗೆ ತಯಾರಿ ನಡೆಸಲು ಅವರಿಗೆ ಸರಿಯಾದ ಸಮಯ ಸಿಕ್ಕಿರಲಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.