ಈ ಚುನಾವಣೆಯಲ್ಲಿ ಗಂಭೀರ ವಿಷಯವೇನೆಂದರೆ, ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ತನ್ನ ಜೀವಿತದುದ್ದಕ್ಕೂ ಮತ್ತು ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಮಹಿಳೆಯರ ವಿರುದ್ಧ ಹೇಳಿರುವ ಮಾತುಗಳು ಆಘಾತಕಾರಿಯಾದುದು
ವಾಷಿಂಗ್ಟನ್(ಅ.14): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷ ಬರಾಕ್ ಒಬಾಮರ ಪತ್ನಿ ಮಿಶೆಲ್ ಒಬಾಮ ಭಾರಿ ವಾಕ್ಸಮರ ನಡೆಸಿದ್ದಾರೆ. ಟ್ರಂಪ್ ನೀಡಿದ್ದ ಮಹಿಳೆಯರ ವಿರುದ್ಧದ ಅಶ್ಲೀಲ ಹೇಳಿಕೆಗಳು ಮತ್ತು ಲೈಂಗಿಕ ಆಕ್ರಮಣಕಾರಿ ವರ್ತನೆಯು ತನ್ನನ್ನು ಜನಸಮುದಾಯದ ನಡುವೆ ತಲ್ಲಣಗೊಳಿಸುವಂತೆ ಮಾಡಿದೆ ಎಂದು ಮಿಶೆಲ್ ಹೇಳಿದ್ದಾರೆ.
‘‘ಈ ಚುನಾವಣೆಯಲ್ಲಿ ಗಂಭೀರ ವಿಷಯವೇನೆಂದರೆ, ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ತನ್ನ ಜೀವಿತದುದ್ದಕ್ಕೂ ಮತ್ತು ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಮಹಿಳೆಯರ ವಿರುದ್ಧ ಹೇಳಿರುವ ಮಾತುಗಳು ಆಘಾತಕಾರಿಯಾದುದು. ಅವು ಎಷ್ಟೊಂದು ಅವಹೇಳನಕಾರಿ ಎಂದರೆ, ನಾನು ಇಲ್ಲಿ ಅವುಗಳನ್ನು ಮತ್ತೊಮ್ಮೆ ಹೇಳುವಂತೆಯೂ ಇಲ್ಲ. ಅವುಗಳನ್ನು ಕನಸಿನಲ್ಲಿ ನೆನಪಿಸಿಕೊಂಡರೂ ನಡುಕ ಹುಟ್ಟುತ್ತದೆ’’ ಎಂದು ಮಿಶೆಲ್ ತಿಳಿಸಿದ್ದಾರೆ. ನ್ಯೂ ಹ್ಯಾಂಪ್‌ಶೈರ್‌ನ ಮ್ಯಾಂಚೆಸ್ಟರ್ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
ಒಬಾಮ ಮೆಚ್ಚುಗೆ:ಪತ್ನಿ ಮಿಶೆಲ್‌ರ ಭಾಷಣಕ್ಕೆ ಪತಿ ಒಬಾಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ಹಿಲರಿ ಕ್ಲಿಂಟನ್ ಪರವಾಗಿ ನೀವು ಉತ್ತಮ ಮಾತುಗಳನ್ನು ಕೇಳಬೇಕಾಗಿದ್ದಲ್ಲಿ, ಈ ಚುನಾವಣೆಯಲ್ಲಿ ನಿಜವಾದ ವಿಷಯಗಳನ್ನು ತಿಳಿದುಕೊಳ್ಳಲು ಬಯಸಿದ್ದಲ್ಲಿ, ನ್ಯೂ ಹ್ಯಾಂಪ್‌ಶೇರ್‌ನಲ್ಲಿ ಮಿಶೆಲ್‌ರ ಭಾಷಣವನ್ನು ಕೇಳಬೇಕೆಂದು ನಾನು ಸಲಹೆ ನೀಡುತ್ತಿದ್ದೇನೆ’’ ಎಂದು ಒಬಾಮ ಹೇಳಿದ್ದಾರೆ.
