‘ನಮ್ಮ ಮೆಟ್ರೊ’ದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿರಿಸಬೇಕೆಂಬ ಬೇಡಿಕೆ ಮಾರ್ಚ್ ಮಾಸದ ವೇಳೆಗೆ ಈಡೇರುವ ಸಾಧ್ಯತೆಯಿದೆ.
ಬೆಂಗಳೂರು(ಡಿ.22): ‘ನಮ್ಮ ಮೆಟ್ರೊ’ದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿರಿಸಬೇಕೆಂಬ ಬೇಡಿಕೆ ಮಾರ್ಚ್ ಮಾಸದ ವೇಳೆಗೆ ಈಡೇರುವ ಸಾಧ್ಯತೆಯಿದೆ. ಹೌದು, ಮೂಲಗಳ ಪ್ರಕಾರ ಜನವರಿ ಕೊನೆ ವಾರದಲ್ಲಿ ಮೊದಲ ಮೂರು ಬೋಗಿಗಳು ಮೆಟ್ರೊಗೆ ದೊರೆಯಲಿದೆ.
ಹೀಗೆ ಹೆಚ್ಚುವರಿಯಾಗಿ ಬೋಗಿ ದೊರೆತಾಗ ಅದರಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲು ಉದ್ದೇಶಿಸಲಾಗಿದೆ. ಆದರೆ, ಹೆಚ್ಚುವರಿ ಬೋಗಿಗಳು ಜನವರಿಗೆ ದೊರೆತರೂ ಅದು ಪ್ರಾಯೋಗಿಕ ಪರೀಕ್ಷೆ ನಡೆಸಿ ಬಳಕೆಗೆ ತರಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಹೀಗಾಗಿ ನಮ್ಮ ಮೆಟ್ರೊದಲ್ಲಿ ಮಹಿಳಾ ಮೀಸಲು ಬೋಗಿಗಳು ಮಾರ್ಚ್ ವೇಳೆಗೆ ಅಳಡಿಸಲಾಗುತ್ತದೆ ಎಂದು ಬಿಎಂಆರ್ ಸಿಎಲ್ ಮೂಲಗಳು ಹೇಳಿವೆ.
ಮೆಟ್ರೊದಲ್ಲಿರುವ ಸದ್ಯದ 3 ಬೋಗಿಗಳನ್ನು 6 ಬೋಗಿಗಳಿಗೆ ಹೆಚ್ಚಿಸುವ ಸಲುವಾಗಿ ಹೊಸ ಬೋಗಿಗಳ ನಿರ್ಮಾಣಕ್ಕಾಗಿ ಬಿಇಎಂಎಲ್‌ಗೆ ಗುತ್ತಿಗೆ ವಹಿಸಲಾಗಿದೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಗುರುವಾರ ಬಿಇಎಂಎಲ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಬಿಇಎಂಎಲ್ ಅಧಿಕಾರಿಗಳು ಬೋಗಿ ಪೂರೈಕೆ ಬಗ್ಗೆ ಖಚಿತಪಡಿಸಿದ್ದಾರೆ.
2018ರ ಜನವರಿ ಕೊನೆ ವಾರದಲ್ಲಿ ಹೊಸದಾಗಿ ಮೂರು ಬೋಗಿಗಳು ದೊರೆತರೂ ಇದನ್ನು ರೈಲಿಗೆ ಅಳವಡಿಸಲು ಸಾಧ್ಯವಿಲ್ಲ. ಮೊದಲ ಎರಡು ತಿಂಗಳು ಈ ಬೋಗಿಗಳನ್ನು ಪರೀಕ್ಷಿಸಲಾಗುತ್ತದೆ. ಪರೀಕ್ಷೆಯಲ್ಲಿ ಬೋಗಿ ಉತ್ತಮವಾಗಿದೆ ಎಂದು ದೃಢಪಟ್ಟರೆ ಮಾತ್ರ ರೈಲಿಗೆ ಅಳವಡಿಸಲಾಗುತ್ತದೆ. ಅಂದರೆ ಆರು ಬೋಗಿ ರೈಲು ಬರಲು ಮಾರ್ಚ್‌ವರೆಗೆ ಕಾಯಬೇಕಾಗುತ್ತದೆ. ಮೂರು ಬೋಗಿ ರೈಲನ್ನು 6 ಬೋಗಿಯಾಗಿ ಪರಿವರ್ತಿಸಲು ಬಿಎಂಆರ್‌ಸಿಎಲ್ ಸರ್ಕಾರ ಹಾಗೂ ಕೆಲ ಸಂಸ್ಥೆಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೂ ಸ್ವಲ್ಪ ಕಾಲಬೇಕು.
