Asianet Suvarna News Asianet Suvarna News

ಮೆಟ್ರೋ ಪ್ರಯಾಣಿಕರಿಗೆ ಇದೆಂಥ ಕಿರಿಕಿರಿ

ನಿತ್ಯ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ನಿಲ್ದಾಣಗಳಲ್ಲಿ ಅಗತ್ಯ ಭದ್ರತಾ ಸಿಬ್ಬಂದಿ ಇಲ್ಲದ ಕಾರಣದಿಂದ ಈ ರೀತಿಯಾದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. 

Metro Commuter Faces Some In Bangalore
Author
Bengaluru, First Published Oct 21, 2018, 9:15 AM IST

ಬೆಂಗಳೂರು : ಕೆಲವು ನಿಲ್ದಾಣಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಪ್ರಯಾಣಿಕರು ಮೆಟ್ರೋ ರೈಲು ಹತ್ತಲು ಮತ್ತು ಇಳಿಯುವ ಸಂದರ್ಭದಲ್ಲಿ ಕಿರಿಕಿರಿ ಅನುಭವಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ.

ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲು ಬಳಕೆದಾರರ ಸಂಖ್ಯೆ ನಾಲ್ಕು ಲಕ್ಷ ಮೀರುತ್ತಿದೆ. ಆದರೆ, ಮೂರು ಬೋಗಿಯ ಮೆಟ್ರೋ ರೈಲು ಆರು ಬೋಗಿಗಳಾಗಿ ಪರಿವರ್ತನೆಯಾಗಲು ಇನ್ನೂ ಹಲವು ತಿಂಗಳು ಕಾಯುವಂತ ಪರಿಸ್ಥಿತಿ ಇದೆ. ಕೆಂಪೇಗೌಡ ಮೆಟ್ರೋ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣ, ಸರ್ ಎಂ.ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ, ಎಂ.ಜಿ.ರಸ್ತೆ, ಮಲ್ಲೇಶ್ವರಂ, ಯಶವಂತಪುರ ಹೀಗೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಭದ್ರತಾ ಸಿಬ್ಬಂದಿಗಳ (ಗಾರ್ಡ್) ಸಂಖ್ಯೆ ಕಡಿಮೆಯಾಗಿದ್ದು, ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸಂದರ್ಭದಲ್ಲಿ ಸಮಸ್ಯೆಯುಂಟಾಗುತ್ತಿದೆ.

ಪ್ರತಿ ದಿನ ನಾನು ಮೆಟ್ರೋ ರೈಲು ಬಳಸುತ್ತಿದ್ದು, ಪೀಣ್ಯ ಮೆಟ್ರೋ ನಿಲ್ದಾಣದಿಂದ ಎಂ.ಜಿ.ರಸ್ತೆಯಲ್ಲಿರುವ ಕಚೇರಿಗೆ ಹೋಗಲು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ರೈಲು ಬದಲಿಸಬೇಕು. ಈ ಸಂದರ್ಭದಲ್ಲಿ ಇಳಿಯಲು ಕೂಡ ಜಾಗವಿಲ್ಲದಂತೆ ಜನ ತುಂಬಿಕೊಂಡಿರುತ್ತಾರೆ. ಅವರನ್ನು ತಳ್ಳಿ ಇಳಿಯುವಷ್ಟರಲ್ಲಿ ಸಾಕಾಗುತ್ತದೆ. 

ವಿಪರ್ಯಾಸವೆಂದರೆ ಇದನ್ನು ಸರಿಪರಿಸಬೇಕಾದ ಗಾರ್ಡ್‌ಗಳು ಅಲ್ಲಿ ಕಾಣುವುದೇ ಇಲ್ಲ. ಇದು ಪ್ರತಿದಿನದ ಪ್ರಯಾಸ. ಸಂಜೆ ಮನೆಗೆ ಹೋಗುವಾಗಲೂ ಇದು ಮಾಮೂಲಿ ಸಂಗತಿ ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಎಚ್. ಎಸ್.ಚಿದಾನಂದ. ರೇಸ್ ಕೋರ್ಸ್ ರಸ್ತೆಯ ಖಾಸಗಿ ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆ ಉದ್ಯೋಗಿ ಪ್ರಮೀಳಾ ಅವರು ಹೇಳುವಂತೆ, ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೇ ಬರಬಹುದು ಎಂಬ ಕಾರಣಕ್ಕೆ ಕಳೆದ ಒಂದೂವರೆ ವರ್ಷದಿಂದ ಮೆಟ್ರೋ ರೈಲು ಬಳಸುತ್ತಿದ್ದೇನೆ. 

ಬೆಳಗ್ಗೆ 10ಕ್ಕೆ ಕಚೇರಿಯಲ್ಲಿ ಇರಬೇಕಾಗಿರುವುದರಿಂದ ಬೈಯ್ಯಪ್ಪನಹಳ್ಳಿಯಿಂದ 9.27ಕ್ಕೆ  ಹೊರಡುತ್ತೇನೆ. ಈ ವೇಳೆ ಮೈಸೂರು ರಸ್ತೆ, ವಿಜಯನಗರ ನಿಲ್ದಾಣದಲ್ಲಿ ಇಳಿಯಬೇಕಾದ ಅನೇಕರು ಬಾಗಿಲುಗಳಲ್ಲೇ ನಿಂತಿರುತ್ತಾರೆ. ಒಳಗೆ ಹತ್ತುವ ಮತ್ತು ಇಳಿಯುವ ಪ್ರಯಾಣಿಕರಿಗೆ ಅವರಿಂದ ತುಂಬಾ ತೊಂದರೆ ಆಗುತ್ತಿರುತ್ತದೆ. 

ಆದರೆ ಅವರು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮೊಬೈಲ್‌ನೊಳಗೆ ಮುಳುಗಿರುತ್ತಾರೆ. ಹೇಳುವವರು ಇಲ್ಲ. ಕೇಳುವವರು ಇಲ್ಲದಂತಾಗಿದೆ. ದೂರದ ನಿಲ್ದಾಣದಲ್ಲಿ ಇಳಿಯುವವರು ಒಳಗೆ ಹೋಗಿ ಇತರರು ಹತ್ತಿ ಇಳಿಯಲು ಅನುಕೂಲ ಮಾಡಿಕೊಡಬೇಕು ಎಂಬ ಸಾಮಾನ್ಯ ಜ್ಞಾನವೂ ಅವರಿಗಿರುವಂತೆ ಕಾಣುವುದಿಲ್ಲ. ಪ್ರತಿ ದಿನ ಇದೇ ಸಮಸ್ಯೆ. ಬಿಎಂಆರ್‌ಸಿಎಲ್ ಸಂಸ್ಥೆ ಈ ಬಗ್ಗೆ ಗಮನ ಹರಿಸಬೇಕು ಎಂದು ಬೇಸರ ವ್ಯಕ್ತಪಡಿಸುತ್ತಾರೆ. 

Follow Us:
Download App:
  • android
  • ios