ಲಂಡನ್[ಸೆ.12]: ದೇಶಿಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚಿಸಿ ಭಾರತದಿಂದ ಪರಾರಿಯಾಗಿರುವ ಮದ್ಯದ ದೊರೆ ಘೋಷಿತ ಅಪರಾಧಿ ವಿಜಯ್ ಮಲ್ಯ, ತಾವು ದೇಶ ಬಿಡುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.

ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೀಟ್ ಕೋರ್ಟ್ ನ ಹೊರೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ, ಭಾರತದಲ್ಲಿ ಕೋರ್ಟಿನಿಂದ ಶಿಕ್ಷೆ ಪ್ರಕಟವಾದ ನಂತರ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಸಲುವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ ಎಂದಿದ್ದಾರೆ. 

ನನ್ನ ವಿರುದ್ಧ ಆರೋಪಿಸಲಾಗಿರುವ ಪ್ರಕರಣಗಳೆಲ್ಲ ನಿರಾಧಾರ. ಇದೆಲ್ಲವನ್ನು ಕೋರ್ಟ್ ನಿರ್ಧರಿಸುತ್ತದೆ. ಕರ್ನಾಟಕ ಹೈ ಕೋರ್ಟ್ ಕೂಡ ತಮ್ಮ ಪರವಾಗಿ ತೀರ್ಪು ನೀಡುವ ವಿಶ್ವಾಸವಿದೆ ಎಂದು 9 ಸಾವಿರ ಕೋಟಿ ರೂ.ಗಳನ್ನು ದೇಶದಿಂದ ವಂಚಿಸಿ ಇಂಗ್ಲೆಂಡಿನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ತಿಳಿಸಿದರು.

ಭಾರತದಲ್ಲಿರುವ ಪ್ರಕರಣಗಳಿಗೆ ರಾಜಿ ಸಂಧಾನಕ್ಕೆ ಸಿದ್ದವಿರುವ ಮಲ್ಯ ಭಾರತದಲ್ಲಿರುವ ಸೆರೆಮನೆಗಳನ್ನು ವಿಡಿಯೋದಿಂದ ಪರೀಕ್ಷಿಸಬೇಕೆಂದು ಬೀಡಿಕೆಯಿಟ್ಟಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೆರೆಮನೆಗಳ ವಿಡಿಯೋಗಳನ್ನು ಕೋರ್ಟಿಗೆ ನೀಡಲಾಗಿದೆ. ಇಂಗ್ಲೆಂಡಿನ ವೆಸ್ಟ್ ಮಿನಿಸ್ಟರ್  ಮ್ಯಾಜಿಸ್ಟ್ರೀಟ್ ಕೋರ್ಟ್ ವಾದವಿವಾದಗಳು ಕೊನೆಗೊಂಡಿದ್ದು ಡಿ.10 ರಂದು ತೀರ್ಪು ಹೊರಬೀಳಲಿದೆ. 

ನನ್ನನ್ನು ಭೇಟಿಯಾಗಿಲ್ಲ :ಜೇಟ್ಲಿ
ಮಲ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಲ್ಯರನ್ನು ಭೇಟಿ ನೀಡಲು ತಾವು ಅವಕಾಶ ನೀಡಿರಲಿಲ್ಲ. ಸಂಸತ್ ಆವರಣದಲ್ಲಿ ಒಮ್ಮೆ ಮಾತ್ರ ಭೇಟಿಯಾಗಿದ್ದರು ಎಂದು ಸ್ಪಷ್ಟ ಪಡಿಸಿದ್ದಾರೆ.