ಶಾಸಕರು ಸೇರಿ 300 ಮಂದಿ ವಿರುದ್ಧ ಎಫ್‌ಐಆರ್‌ | ಗಡಿ ಪ್ರವೇಶ ನಿರ್ಬಂಧ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವ ವಾಪಸ್‌
ಬೆಳಗಾವಿ: ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡಬೇಕೆಂದು ಆಗ್ರಹಿಸಿ ಎಂಇಎಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಪೊಲೀಸರು ವಿಧಿಸಿದ್ದ ಷರತ್ತನ್ನು ಉಲ್ಲಂಘಿಸಿ ಗಡಿವಿವಾದವನ್ನು ಕೆದಕಿರುವ ಪ್ರಸಂಗ ನಡೆದಿದೆ.
ಪೊಲೀಸರು ವಿಧಿಸಿದ್ದ ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕರಾದ ಸಂಭಾಜಿ ಪಾಟೀಲ್, ಅರವಿಂದ ಪಾಟೀಲ್, ಎಂಇಎಸ್ ಮುಖಂಡ ದೀಪಕ ದಳವಿ ಸೇರಿದಂತೆ 300ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ಬೆಳಗಾವಿ ಪ್ರವೇಶ ನಿರ್ಬಂಧಿಸಿ ಡಿಸಿ ಹೊರಡಿಸಿದ್ದ ಆದೇಶ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸಚಿವ ದಿವಾಕರ ರಾವತೆ ಗಡಿ ಪ್ರವೇಶ ಮುನ್ನವೇ ವಾಪಸ್ ಕೊಲ್ಹಾಪುರಕ್ಕೆ ತೆರಳಿದರು.
ಶಾಸಕರಾದ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ಸೇರಿದಂತೆ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕಾರ್ಯಕರ್ತರು ಜೈ ಮಹಾರಾಷ್ಟ್ರ ಘೋಷಣೆ ಕೂಗಿ, ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರಕ್ಕೆ ಸಡ್ಡು ಹೊಡೆದರು. ಜಿಲ್ಲಾಧಿಕಾರಿ ಎನ್.ಜಯರಾಂ ಅವರು ಮನವಿ ಸ್ವೀಕರಿಸಲು ಪ್ರತಿಭಟನಾಕಾರರ ಬಳಿ ತೆರಳುತ್ತಿದ್ದಂತೆಯೇ ಏರುಧ್ವನಿಯಲ್ಲೇ ಎಲ್ಲರೂ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದರು.
ಶಾಂತ ರೀತಿಯಿಂದ ಪ್ರತಿಭಟನಾ ರ್ಯಾಲಿ ಮಾಡುವುದಾಗಿ ಅನುಮತಿ ಪಡೆದಿದ್ದ ಎಂಇಎಸ್ ಷರತ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕಲಂ 153 (ಎ), 188 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ರ್ಯಾಲಿ ವೀಡಿಯೋ ದೃಶ್ಯಗಳನ್ನು ವೀಕ್ಷಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಅಮರನಾಥ ರಡ್ಡಿ ತಿಳಿಸಿದ್ದಾರೆ.
ಶಾಸಕರ ಪ್ರತಿಕೃತಿ ದಹನ:ಗೋಕಾಕದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಾಸಕ ಸಂಭಾಜಿ ಪಾಟೀಲ, ಅರವಿಂದ ಪಾಟೀಲ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
