ಎಂಇಪಿ ಗೆದ್ದರೆ ಪಾನ ನಿಷೇಧ, ಜಿಎಸ್‌ಟಿ ರದ್ದು

First Published 11, Mar 2018, 8:10 AM IST
MEP Party Leader Nouhera Talks About GST
Highlights

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಸಬಲೀಕರಣ ಪಕ್ಷಕ್ಕೆ (ಎಂಇಪಿ) ಬಹುಮತ ನೀಡಿ ರಾಜ್ಯದ ಜನರು ಅಧಿಕಾರಕ್ಕೆ ತಂದರೆ ಮದ್ಯಪಾನ ಮತ್ತು ಜಿಎಸ್‌ಟಿಯನ್ನು ರದ್ದುಗೊಳಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೇರಾ ಶೇಖ್‌ ತಿಳಿಸಿದ್ದಾರೆ.

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಸಬಲೀಕರಣ ಪಕ್ಷಕ್ಕೆ (ಎಂಇಪಿ) ಬಹುಮತ ನೀಡಿ ರಾಜ್ಯದ ಜನರು ಅಧಿಕಾರಕ್ಕೆ ತಂದರೆ ಮದ್ಯಪಾನ ಮತ್ತು ಜಿಎಸ್‌ಟಿಯನ್ನು ರದ್ದುಗೊಳಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೇರಾ ಶೇಖ್‌ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಿದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಂಇಪಿ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷದ ಅವಧಿಯಲ್ಲಿ ಕರ್ನಾಟಕವು ಸೇರಿದಂತೆ ದೇಶದಲ್ಲಿ ಪಾನ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗುವುದು. ಈ ಮೂಲಕ ಭಾರತೀಯ ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ನಿತ್ಯವೂ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲಾಗುವುದು. ಮಾತ್ರವಲ್ಲ, ಬಡವರು, ಉದ್ಯಮಕ್ಕೆ ಮಾರಕವಾಗಿರುವ ಜಿಎಸ್‌ಟಿ ಪದ್ಧತಿಯನ್ನು ರದ್ದುಪಡಿಸಲಾಗುವುದು. ಜನ ಸಾಮಾನ್ಯರ ಮೇಲಿನ ತೆರಿಗೆಯ ಭಾರವನ್ನು ಕಡಿಮೆಗೊಳಿಸಲಾಗುವುದು ಎಂದರು.

ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪ್ರತಿ ವರ್ಷ ಲಕ್ಷಾಂತರ ಕೋಟಿ ರು. ಖರ್ಚು ಮಾಡುತ್ತಿವೆ. ಆದರೆ, ಈ ಹಣ ಎಲ್ಲಿಗೆ ಹೋಗುತ್ತಿದೆ? ದೇಶದ ಶೇ.70ರಷ್ಟುಮಕ್ಕಳಿಗೆ ಇನ್ನೂ ಯಾವ ಕಾರಣಕ್ಕಾಗಿ ಗುಣಮಟ್ಟಶಿಕ್ಷಣ ಸಿಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಶಿಕ್ಷಣ ಎಂಬುದು ವ್ಯಾಪಾರದ ಸರಕಾಗಿದೆ. ಬಡವರ ಪಾಲಿಗೆ ಗಗನ ಕುಸುಮವಾಗುತ್ತಿದೆ. ಉಳ್ಳವರ ಮಕ್ಕಳಿಗೊಂದು ಶಿಕ್ಷಣ ಮತ್ತು ದೀನ ದಲಿತರ ಮಕ್ಕಳಿಗೊಂದು ಶಿಕ್ಷಣ ಎಂಬ ತಾರತಮ್ಯ, ಅಸಮಾನತೆ ತೊಡೆದು ಹಾಕಲಾಗುವುದು ಎಂದು ಹೇಳಿದರು.

ದೇಶದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಮಹಿಳೆಯರನ್ನು ಮತಕ್ಕಾಗಿ ಬಳಸಿಕೊಂಡು ಅವರ ಮೂಲಕ ಅಧಿಕಾರ ಹಿಡಿಯುತ್ತಿವೆ. ಆದರೆ, ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಗೌರವದ ಬದುಕು ಕಲ್ಪಿಸಿಕೊಡಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ತಯಾರಿಸುವ ಮಹಿಳೆಯರಿಗೆ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಪ್ರಮಾಣದ ವೇತನ ಕೊಡಲಾಗುತ್ತಿದೆ. ಯಾವುದೇ ಜಾತಿಯಲ್ಲಿ ಜನಿಸಿದರೂ ನಾವೆಲ್ಲರೂ ಭಾರತೀಯರು. ವರದಕ್ಷಿಣೆ ಕೇಳುವವರಿಗೆ ಮಗಳನ್ನು ನೀಡುವ ಬದಲು ಆಕೆಗೆ ಉತ್ತಮ ಶಿಕ್ಷಣ ಕೊಡಿಸಬೇಕು. ರಾಜಕೀಯದ ನಾಯಕರು ಮಹಿಳೆಯರು ಪುರುಷರಷ್ಟೇ ಸಮಾನರೆಂದು ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಇಪಿ ಹೊಸದು ಎಂಬ ಭಾವನೆ, ಕಲ್ಪನೆ ಇದೆ. ಆದರೆ, ಇದು ಸರಿಯಲ್ಲ, 20 ವರ್ಷಗಳ ಸತತ ಪರಿಶ್ರಮದ ನಂತರ ಈ ಪಕ್ಷವು ಜನ್ಮ ತಾಳಿದೆ. ಕೇವಲ ಕರ್ನಾಟಕದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸ್ಥಾಪನೆ ಮಾಡಿಲ್ಲ. ಇದು ನಮ್ಮ ಉದ್ದೇಶವೂ ಅಲ್ಲ. ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೂ ಸ್ಪರ್ಧಿಸಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ರಾಜ್ಯದ 224 ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಹೊಸ ಪಕ್ಷವಾದರೂ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು 5-6 ಅಭ್ಯರ್ಥಿಗಳು ಮುಂದಾಗಿದ್ದಾರೆ. ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಜನತೆ ನಾಡಿಮಿಡಿತವನ್ನು ತಿಳಿದುಕೊಳ್ಳಲಾಗಿದೆ. ಪ್ರಾಮಾಣಿಕರು ಶುದ್ಧ ಹಸ್ತರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಲಾಗುವುದು ಎಂದರು.

loader