ಮಹಿಳೆಯರಿಗೆ ಎಂಇಪಿ ಭರವಸೆಗಳ ಬಂಪರ್‌

MEP Party Election Mandatory
Highlights

ರಾಜ್ಯದ ರೈತರ ಕೃಷಿ ಸಾಲ ಬಡ್ಡಿ ಸಮೇತ ಮನ್ನಾ, ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಮಹಿಳಾ ಆಸ್ಪತ್ರೆಗಳ ಸ್ಥಾಪನೆ, ಕೊಳಗೇರಿ ನಿರ್ಮೂಲನೆಗೆ ಆದ್ಯತೆ, ಮಹಿಳಾ ಉದ್ಯಮಿಗಳಿಗೆ ಬಡ್ಡಿರಹಿತ ಸಾಲಸೌಲಭ್ಯ ಸೇರಿದಂತೆ ಎಲ್ಲಾ ಇಲಾಖೆಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವ ಕುರಿತು ಎಂಇಪಿ (ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ) ಭರವಸೆಗಳ ಮಹಾಪೂರವನ್ನೇ ಹರಿಸಿದೆ.

ಬೆಂಗಳೂರು : ರಾಜ್ಯದ ರೈತರ ಕೃಷಿ ಸಾಲ ಬಡ್ಡಿ ಸಮೇತ ಮನ್ನಾ, ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಮಹಿಳಾ ಆಸ್ಪತ್ರೆಗಳ ಸ್ಥಾಪನೆ, ಕೊಳಗೇರಿ ನಿರ್ಮೂಲನೆಗೆ ಆದ್ಯತೆ, ಮಹಿಳಾ ಉದ್ಯಮಿಗಳಿಗೆ ಬಡ್ಡಿರಹಿತ ಸಾಲಸೌಲಭ್ಯ ಸೇರಿದಂತೆ ಎಲ್ಲಾ ಇಲಾಖೆಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವ ಕುರಿತು ಎಂಇಪಿ (ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ) ಭರವಸೆಗಳ ಮಹಾಪೂರವನ್ನೇ ಹರಿಸಿದೆ.ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್‌ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪ್ರಣಾಳಿಕೆಯಲ್ಲೇನಿದೆ?: ಪ್ರಣಾಳಿಕೆಯಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಶಿಕ್ಷಣ ಸೇರಿದಂತೆ ಎಲ್ಲಾ ಇಲಾಖೆಗಳ ಅಭಿವೃದ್ಧಿಗೆ ಒತ್ತು ನೀಡುವ ಕುರಿತು ಆಶ್ವಾಸನೆ ನೀಡಲಾಗಿದೆ. ಶಾಸನ ಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟುಸ್ಥಾನ ಮೀಸಲು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ಮಹಿಳಾ ಆಸ್ಪತ್ರೆಗಳ ಸ್ಥಾಪನೆ, ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿ ಸ್ಥಾಪನೆ ಮಾಡಲಾಗುತ್ತದೆ.

ರೈತರಿಗೆ ಎಲ್ಲಾ ಕೃಷಿ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಲಾಗುವುದು, ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ, ಸೂಕ್ತ ಮಾರುಕಟ್ಟೆಸೌಲಭ್ಯ, ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ತರಬೇತಿ ಕೇಂದ್ರಗಳ ಸ್ಥಾಪನೆ, ಕೃಷಿ ಮತ್ತು ಗುಡಿ ಕೈಗಾರಿಕೆ ಸ್ಥಾಪನೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಬಿಪಿಎಲ್‌ ಕುಟುಂಬದ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ, ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು, ಪ್ರತಿ ವರ್ಷ 10 ಲಕ್ಷ ಉದ್ಯೋಗ ಸೃಷ್ಟಿ, ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಆಯಾ ವರ್ಷವೇ ನೇಮಕ, ಸಮಾಜದಲ್ಲಿ ದಮಿನಿತರು, ಧ್ವನಿ ಇಲ್ಲದವರಿಗೆ ಭೂಮಿ, ಗರ್ಭಿಣಿಯರಿಗೆ ಪ್ರಸವದ ನಂತರ ಆರು ತಿಂಗಳ ಕಾಲ ಆರ್ಥಿಕ ನೆರವು, ಘನತ್ಯಾಜ್ಯ ವಿಲೇವಾರಿಗೆ ವಿಶ್ವಮಟ್ಟದ ತಂತ್ರಜ್ಞಾನ ಬಳಕೆ, ದುಬಾರಿ ಶುಲ್ಕ ವಿಧಿಸಿ ಶೋಷಣೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ, ಮೆಟ್ರೋ ಸೇವೆ ಮತ್ತಷ್ಟುನಗರಗಳಿಗೆ ವಿಸ್ತರಣೆ, ಪ್ರತಿ ಹಳ್ಳಿಯಲ್ಲಿ ಜೈವಿಕ ಅನಿಲ ಸ್ಥಾಪನೆ, ಕಾಲಮಿತಿಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ, ನೇಕಾರರಿಗೆ ಪ್ರತ್ಯೇಕ ಬ್ಯಾಂಕ್‌ ಸ್ಥಾಪನೆ, ಅಪರಾಧಿಕಗಳ ಪತ್ತೆಗೆ ಇ-ಟೆಕ್ನಾಲಜಿ ಬಳಕೆ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಹಣ್ಣು-ತರಕಾರಿಗಳಿಗೆ ಸರ್ಕಾರದಿಂದಲೇ ಬೆಂಬಲ ಬೆಲೆ ವ್ಯವಸ್ಥೆ, ಜಿಲ್ಲಾಮಟ್ಟದಲ್ಲಿ ಶೀತಲೀಕರಣ ಘಟಕ ಸ್ಥಾಪನೆಗೆ ಆದ್ಯತೆ, ಮೀನುಗಾರರಿಗೆ ಆಧುನಿಕ ಫಿಷಿಂಗ್‌ ಬೋಟು ಒದಗಿಸುವುದು, ಮೀನು ರಫ್ತಿಗೆ ಉತ್ತೇಜನ, ರಾಜ್ಯದಲ್ಲಿ ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿ, ಪ್ರವಾಸಿ ಕೇಂದ್ರದಲ್ಲಿ ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ, ಭ್ರಷ್ಟಾಚಾರ ತಡೆಗೆ ವಿಶೇಷ ಜಾಗೃತ ವ್ಯವಸ್ಥೆ ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

16ಕ್ಕೆ ಅಭ್ಯರ್ಥಿಗಳ ಪಟ್ಟಿಬಿಡುಗಡೆ : ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಏ.15 ಅಥವಾ 16ರಂದು ಬಿಡುಗಡೆ ಮಾಡಲಾಗುವುದು ಎಂದು ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್‌ ತಿಳಿಸಿದ್ದಾರೆ.

ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದ್ದು, ಮುಖಂಡರ ತಂಡವೊಂದು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಂಇಪಿ ಪಕ್ಷವು ಬಿಜೆಪಿಯ ಬಿ ಟೀಂ ಎಂಬ ಆರೋಪ ಸತ್ಯಕ್ಕೆ ದೂರವಾದದು. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಪಕ್ಷವು ಸ್ಪರ್ಧಿಸಲಿದೆ ಎಂದು ಹೇಳಿದರು.

loader