ತಿರುನೆಲ್ವೇಲಿ: ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ಯೋಜನೆಗೆ ತಡೆಯೊಡ್ಡಲು ಒಂದೆಡೆ ತಮಿಳುನಾಡು ಸರ್ಕಾರ ಕಾನೂನು ಹೋರಾಟ ಆರಂಭಿಸಿದ್ದರೆ, ಮತ್ತೊಂದೆಡೆ ರಾಜಕೀಯ ನಾಯಕರು ನಾಲಗೆ ಹರಿಬಿಡಲು ಆರಂಭಿಸಿದ್ದಾರೆ.

ಒಂದು ವೇಳೆ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ ತಮಿಳುನಾಡು ಪ್ರತ್ಯೇಕ ರಾಷ್ಟ್ರ ವಾಗ ಬೇಕಾಗುತ್ತದೆ ಎಂದು ಪ್ರಚೋದನಾಕಾರಿ ಭಾಷಣಗಳಿಗೆ ಹೆಸರುವಾಸಿಯಾಗಿರುವ ಎಂಡಿಎಂಕೆ ನಾಯಕ ವೈಕೋ ಗುಡುಗಿದ್ದಾರೆ.

ಪುದುಕೋಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ಪರ ಪಕ್ಷಪಾತ ಮಾಡುತ್ತಿದೆ. ನಮ್ಮ ಹಿತಾಸಕ್ತಿಯನ್ನು ಕೇಂದ್ರ ಕಾಯದಿದ್ದ ಮೇಲೆ ತಮಿಳುನಾಡು ಭಾರತದ ಭಾಗವಾಗಿರುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು. 

ಮೇಕೆದಾಟು ಅಣೆಕಟ್ಟೆ ನಿರ್ಮಾಣದಿಂದ ತಮಿಳುನಾಡಿನಲ್ಲಿ 25 ಲಕ್ಷ ಎಕರೆ ಕೃಷಿ ಭೂಮಿ ನೀರಾವರಿಯಿಂದ ವಂಚಿತವಾಗಲಿದೆ. 5 ಕೋಟಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಲಿದೆ. ಇದರ ಜತೆಗೆ ಅಣೆಕಟ್ಟೆ ಸುರಕ್ಷತಾ ಮಸೂದೆ 2018 ಏನಾದರೂ ಅಂಗೀಕಾರವಾದರೆ ದೇಶದಲ್ಲೇ ಅತಿ ಹೆಚ್ಚು ಬಾಧೆಗೆ ಒಳಗಾಗುವ ರಾಜ್ಯ ತಮಿಳುನಾಡು ಆಗಲಿದೆ. ಆ ಮಸೂದೆ ಕಾಯ್ದೆಯಾದರೆ ಅಂತಾರಾಜ್ಯ ಜಲ ವಿವಾದಗಳು ಅರ್ಥ ಕಳೆದುಕೊಳ್ಳುತ್ತವೆ. ನ್ಯಾಯಾಧಿಕರಣಗಳ ಅಸ್ತಿತ್ವ ಕೊನೆಯಾಗುತ್ತದೆ. ಕರ್ನಾಟಕ ಹಾಗೂ ಕೇರಳದಿಂದ ನೀರು ಸಿಗದಂತಾಗುತ್ತದೆ ಎಂದರು.