ಮೀ ಟೂ ಅಭಿಯಾನದ ಬಳಿಕ, ಅಕ್ಕಪಕ್ಕದಲ್ಲಿ ಮಹಿಳೆಯರಿದ್ದರೆ ನಗರ ಪ್ರದೇಶದ ಶೇ.50ರಷ್ಟು ಪುರುಷರು ಹಿಂದಿಗಿಂತ ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. 

ನವದೆಹಲಿ: ಕರ್ತವ್ಯದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಸಂತ್ರಸ್ತ ಮಹಿಳೆಯರು ಭಾರತದಾದ್ಯಂತ ಆರಂಭಿಸಿರುವ ಮೀ ಟೂ ಆಂದೋಲನ, ನಗರಪ್ರದೇಶದಲ್ಲಿ ಪುರುಷರಲ್ಲಿ ಹೊಸ ಭಯ ಹುಟ್ಟುಹಾಕಿದೆ ಎಂಬ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಮೀ ಟೂ ಅಭಿಯಾನದ ಬಳಿಕ, ಅಕ್ಕಪಕ್ಕದಲ್ಲಿ ಮಹಿಳೆಯರಿದ್ದರೆ ನಗರ ಪ್ರದೇಶದ ಶೇ.50ರಷ್ಟು ಪುರುಷರು ಹಿಂದಿಗಿಂತ ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

‘ದ ಯು ಗೌ ಇಂಡಿಯಾ’ ಎಂಬ ಸಂಸ್ಥೆ ಅ.16-22ರ ಅವಧಿಯಲ್ಲಿ ದೇಶದ ಮಹಾನಗರಗಳ ಸಾವಿರಾರು ಪುರುಷರನ್ನು ಸಂದರ್ಶಿಸಿ, ಮೀ ಟೂ ಅಭಿಯಾನ, ಅಭಿಯಾನ ಆರಂಭವಾದ ಬಳಿಕ ಮಹಿಳೆಯರ ಜೊತೆಗಿನ ಒಡನಾಟದ ಬಗ್ಗೆ ಪ್ರಶ್ನಿಸಿತ್ತು. ಈ ವೇಳೆ ಶೇ.50ರಷ್ಟುಪುರುಷರು, ನಮ್ಮ ಅಕ್ಕಪಕ್ಕ ಮಹಿಳೆಯರು ಇದ್ದರೆ ನಾವು ಈ ಹಿಂದೆಂದಿಗಿಂತಲೂ ಹೆಚ್ಚಿನ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದಾರೆ.

ಇನ್ನು ತಮ್ಮ ಮಾತುಗಳನ್ನು ಮಹಿಳೆಯರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಎಂಬ ಭೀತಿಯಿಂದಾಗಿ, ಪ್ರತೀ ಮೂವರು ವ್ಯಕ್ತಿಗಳ ಪೈಕಿ ಓರ್ವ ವ್ಯಕ್ತಿ, ಮಹಿಳೆಯರೊಂದಿಗೆ ಕೇವಲ ಕೆಲಸದ ವಿಚಾರಗಳನ್ನು ಮಾತ್ರವೇ ಮಾತನಾಡುತ್ತಾರೆ ಎಂದು ಯುಗೌವ್‌ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಜೊತೆಗೆ, ತಮ್ಮ ತಂಡದಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುತ್ತೇವೆ ಎಂದು ಮೂರನೇ ಒಂದು ಭಾಗದಷ್ಟುಪುರುಷರು ಹೇಳಿದ್ದಾರೆ. ಆದಾಗ್ಯೂ, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಮಾತ್ರ ಗಂಭೀರ ಸಮಸ್ಯೆ ಎಂಬುದನ್ನು ಶೇ.76 ಭಾರತದ ನಗರವಾಸಿಗಳು ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಬಹುತೇಕ ಜನ, ಅನುಮತಿ ಇಲ್ಲದೆಯೇ ದೈಹಿಕ ಸಂಬಂಧ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಸಂದೇಶ ಹಾಗೂ ಚಿತ್ರಗಳನ್ನು ರವಾನಿಸುವುದು ಕೂಡಾ ಲೈಂಗಿಕ ಕಿರುಕುಳ ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.