ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದ ನಟಿ ಶ್ರುತಿ ಹರಿಹರನ್ ಗೆ ಇದೀಗ ಸಂಕಷ್ಟ ಎದುರಾಗಿದೆ. ಕೋರ್ಟ್ ಶ್ರುತಿಗೆ ನೋಟಿಸ್ ಜಾರಿ ಮಾಡಿದೆ. 

ಬೆಂಗಳೂರು :  ತಮ್ಮ ವಿರುದ್ಧ ‘ಮೀ ಟೂ’ ಅಭಿಯಾನದ ಮೂಲಕ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್‌ ಅವರು ಮಾನಹಾನಿಕರವಾದ ಹೇಳಿಕೆಗಳನ್ನು ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಹಿರಿಯ ನಟ ಅರ್ಜುನ್‌ ಸರ್ಜಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಸಂಬಂಧ ಪ್ರತಿವಾದಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನಗರದ 28ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಆರ್‌.ಮೆಂಡೋನ್ಸಾ ಅವರು, ಪ್ರಕರಣದಲ್ಲಿ ಏಕ ಮುಖವಾಗಿ ತೀರ್ಪು ನೀಡಲು ಸಾಧ್ಯವಿಲ್ಲ. ನಟಿ ಶ್ರುತಿ ಹರಿಹರನ್‌ ಪರ ವಕೀಲರು ಈಗಾಗಲೇ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಸಿದ್ದಾರೆ. ಅವರ ವಾದ ಆಲಿಸಿದ ನಂತರ ಆದೇಶ ಪ್ರಕಟಿಸಲಾಗುವುದು ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಈ ಸಂಬಂಧ ಸೋಮವಾರ ಲಿಖಿತ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಯಾದ ಶ್ರುತಿ ಹರಿಹರನ್‌ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದರು.

ತಮ್ಮ ಕಕ್ಷಿದಾರರ ವಿರುದ್ಧ ಅಪಮಾನಕರ ಹೇಳಿಕೆಗಳನ್ನು ನೀಡಿ ಮಾನಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಐದು ಕೋಟಿ ರು.ಗಳ ಮಾನನಷ್ಟಪ್ರಕರಣ ದಾಖಲಿಸಿದ ವಕೀಲ ಶ್ಯಾಮ್‌ಸುಂದರ್‌, ತಮ್ಮ ಕಕ್ಷಿದಾರರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಕಾಜ್ಞೆ ವಿಧಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆಗೆ ಬರುವುದಕ್ಕೂ ಮುನ್ನ ಶ್ರುತಿ ಪರ ವಕೀಲರಾದ ಜೈನಾ ಕೊಠಾರಿ ವಕಾಲತ್ತು ಸಲ್ಲಿಸಿ ತಮ್ಮ ವಾದ ಆಲಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಜಾ ಪರ ವಕೀಲ ಶ್ಯಾಂಸುಂದರ್‌, ಇದು ನ್ಯಾಯಾಲಯದ ಕಲಾಪದಲ್ಲಿ ಮೂಗು ತೂರಿಸಿದಂತಾಗುತ್ತದೆ. ನಟಿ ಶ್ರುತಿ ಅವರು ನ್ಯಾಯಾಲಯದಲ್ಲಿ ಕೇವಿಯಟ್‌ ಸಲ್ಲಿಸಿಲ್ಲ. ನಾವು ಸಲ್ಲಿಸಿರುವ ಮಧ್ಯಂತರ ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ನೋಟಿಸ್‌ ಕೂಡ ಜಾರಿ ಆಗಿಲ್ಲ. ಹೀಗಿದ್ದರೂ ಯಾವ ಆಧಾರದಲ್ಲಿ ವಾದ ಮಾಡಲು ಸಾಧ್ಯ? ಇದಕ್ಕೆ ನ್ಯಾಯಾಲಯ ಅವಕಾಶ ಕೊಡಬಾರದು. ನೋಟಿಸ್‌ ಪಡೆಯದೆ ವಕಾಲತ್ತು ವಹಿಸಿದರೆ ಅದು ನಿಯಮ ಉಲ್ಲಂಘನೆ ಆಗುತ್ತದೆ. ಆದ್ದರಿಂದ ಶ್ರುತಿ ಪರ ವಕೀಲರಿಗೆ ವಾದ ಮಂಡನೆಗೆ ಅವಕಾಶ ನೀಡಬಾರದು ಮತ್ತು ಮಧ್ಯಂತರ ಆದೇಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರುತಿ ಪರ ವಕೀರು, ‘ಶ್ರುತಿ ಹರಿಹರನ್‌ ಅವರು ತಮ್ಮ ಪರವಾಗಿ ನ್ಯಾಯಾಲಯಲ್ಲಿ ವಾದ ಮಂಡಿಸುವಂತೆ ಒಪ್ಪಿಗೆ ನೀಡಿದ್ದರಿಂದಲೇ ನಾನು ಹಾಜರಾಗಿದ್ದೇನೆ. ನಾನಾಗಿಯೇ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. ಆ ನಂತರ ನ್ಯಾಯಾಲಯ ಮಧ್ಯಾಹ್ನ 3 ಗಂಟೆಗೆ ವಿಚಾರಣೆಯನ್ನು ಮುಂದೂಡಿತು.

ಮಧ್ಯಾಹ್ನ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ವಕೀಲೆ ಜೈನಾ ಕೊಠಾರಿ ಅವರು ತಮ್ಮ ವಾದವನ್ನೂ ಆಲಿಸಿ ತೀರ್ಪು ನೀಡಬೇಕು ಎಂದು ಶ್ರುತಿ ಪರ ವಕಾಲತ್ತು ಸಲ್ಲಿಸಿದರು. ಈ ವೇಳೆಯಲ್ಲೂ ಇಬ್ಬರೂ ವಕೀಲರು ಬೆಳಗ್ಗಿನ ತಮ್ಮ ವಾದವನ್ನೇ ಮಂಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಸಂಜೆಗೆ ಕಾಯ್ದಿರಿಸಿತು.

ಎರಡೂ ಕಡೆಯ ವಾದ ಕೇಳಬೇಕು:

ನ್ಯಾಯಾಂಗದ ನೈಸರ್ಗಿಕ ನ್ಯಾಯದ ನಿಯಮದ ಪ್ರಕಾರ ಪ್ರತಿವಾದಿಯ ವಾದ ಆಲಿಸಿದ ನಂತರವೇ ತೀರ್ಮಾನ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟನ್ಯಾಯಾಲಯ ತಮ್ಮ ವಾದ ಮಂಡಿಸುವಂತೆ ನಟಿ ಶ್ರುತಿಗೆ ನೋಟಿಸ್‌ ಜಾರಿ ಮಾಡಿತು. ಸರ್ಜಾ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ದಾಖಲೆಗಳನ್ನೂ ಶ್ರುತಿ ಪರ ವಕೀಲರಿಗೆ ನೀಡುವಂತೆ ತಿಳಿಸಿದ ನ್ಯಾಯಾಲಯ ಲಿಖಿತ ವಾದ ಮಂಡಿಸಲು ವಿಚಾರಣೆಯನ್ನು ಅ.29ಕ್ಕೆ ಮುಂದೂಡಿತು.

ನಟ ಅರ್ಜುನ್‌ ಸರ್ಜಾ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ತಡೆ ನೀಡಬೇಕೆಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯ ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ತೀರ್ಪು ನೀಡಲು ನಿರ್ಧರಿಸಿ ಶ್ರುತಿ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಅಲ್ಲದೆ, ಇದೇ ರೀತಿಯ ಆರೋಪಗಳು ಮುಂದುವರೆದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು.

- ಶ್ಯಾಂಸುಂದರ್‌, ಸರ್ಜಾ ಪರ ವಕೀಲರು

ಪ್ರಕರಣ ನ್ಯಾಯಾಲಯದಲ್ಲಿ ಇದೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ತಪ್ಪಾಗುತ್ತದೆ. ನ್ಯಾಯಾಲಯದ ತೀರ್ಪಿನಲ್ಲೇ ಏನು ಹೇಳಬೇಕೋ ಅದನ್ನು ಹೇಳಿದೆ. ಆದ್ದರಿಂದ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದು ಸರಿಯಾಗುವುದಿಲ್ಲ.

- ಜೈನಾ ಕೊಠಾರಿ, ಶ್ರುತಿ ಪರ ವಕೀಲರು