ಹಾಸನ[ಸೆ.18]: ರಾಜ್ಯದಲ್ಲಿ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿರುವ ಜೆಡಿಎಸ್‌ ಮುಗಿಸಲು ರಾಷ್ಟ್ರೀಯ ಪಕ್ಷಗಳು ಒಳಸಂಚು ನಡೆಸುತ್ತಿದ್ದು, ಇದು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜೆಡಿಎಸ್‌ ಮುಗಿಸಲು ಕಚೇರಿ ಕಿತ್ತುಕೊಂಡರು. ಈಗ ಕಚೇರಿ ಕಟ್ಟಿಲ್ಲವಾ, ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಲ್ಲದೇ ಬೇರೆ ಯಾರೇ ಆಗಿದ್ದರೂ ಬಿಜೆಪಿಗೆ ಶರಣಾಗುತ್ತಿದ್ದರು. ಅವರೊಬ್ಬರೇನಾ ಆಸ್ತಿ ಮಾಡಿರುವುದು? ಬೇರೆ ಪಕ್ಷದಲ್ಲಿರುವವರು ಯಾರು ಆಸ್ತಿ ಮಾಡಿಲ್ಲವಾ ಎಂದು ಪ್ರಶ್ನಿಸಿದ ರೇವಣ್ಣ, ಡಿಕೆಶಿ ಜೊತೆ ಪ್ರತಿದಿನ ನಾನು, ದೇವೇಗೌಡರು, ಕುಮಾರಸ್ವಾಮಿ ಸಂಪರ್ಕದಲ್ಲಿದ್ದೇವೆ. ಆದರೆ, ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಸಿದ್ದು ಸಿಎಂ ಆದ್ರೆ ಬೇಡಾ ಅನ್ನಲ್ಲ:

ಸಿದ್ದರಾಮಯ್ಯ ತಿಂಡಿ ತಿನ್ನೋಕೆ ಪ್ರೊ.ರಂಗಪ್ಪನವರ ಮನೆಗೆ ಹೋಗಿದ್ದರು. ನಾನು ಸಿದ್ದರಾಮಯ್ಯ ಮನೆಗೆ ಹೋಗ್ತೀನಿ, ಅವರು ನಮ್ಮ ಮನೆಗೆ ಬರುತ್ತಾರೆ. ಇದರರ್ಥ ಅವರು ಜೆಡಿಎಸ್‌ಗೆ ಬರ್ತಾರೇ ಅಂತಾನಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸಿಎಂ ಆದರೆ ನಾವೇನು ಬೇಡ ಎನ್ನುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.