Asianet Suvarna News Asianet Suvarna News

ಲಿಂಗಾಯತ ಧರ್ಮಕ್ಕೆ ಕೇಂದ್ರದಿಂದ ಸಿಗುತ್ತಾ ಮಾನ್ಯತೆ..?

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಮ್ಮ ಬೇಡಿಕೆ ಅಚಲವಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡದಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇವೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

MB Patil Speaks About Lingayat Religion Issue
Author
Bengaluru, First Published Aug 12, 2018, 10:31 AM IST

ಬೆಂಗಳೂರು :  ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಮ್ಮ ಬೇಡಿಕೆ ಅಚಲವಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡದಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇವೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಧರ್ಮ ಜಾಗತಿಕ ಧರ್ಮ ಆಗಬೇಕು ಎಂಬುದು ನಮ್ಮ ಗುರಿ. ಈ ಬಗ್ಗೆ ನಮ್ಮ ಪ್ರಯತ್ನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿಲ್ಲ ಎಂಬುದನ್ನೂ ಸಾಬೀತು ಮಾಡಿದ್ದೇವೆ. ನಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಜಾಮದಾರ್‌ ಅವರ ಬಳಿ ಮೂರ್ನಾಲ್ಕು ಗಂಟೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗಬೇಕು. ಈ ಬಗ್ಗೆ ಕಟ್ಟಕಡೆಯ ಜನರಿಗೂ ಜಾಗೃತಿ ಮೂಡಿಸಲಾಗುವುದು. ನಮ್ಮ ಹೋರಾಟ ಎಂದಿನಂತೆ ಮುಂದುವರೆಸಲಾಗುವುದು. ನಮ್ಮ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಪ್ರಸ್ತಾವನೆ ಬಗ್ಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಸ್ಪಂದಿಸದಿದ್ದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇವೆ ಎಂದರು.

ಬರ ಪರಿಹಾರಕ್ಕೆ ಸಿಎಂ ಜತೆ ಚರ್ಚೆ:  ಉತ್ತರ ಕರ್ನಾಟಕದ ಕೆಲವು ಕಡೆ ಮಾತ್ರ ಮಳೆಯಾಗಿದ್ದು, ಬಹುತೇಕ ತಾಲೂಕುಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಉತ್ತರ ಕರ್ನಾಟಕದಲ್ಲಿ ಅಣೆಕಟ್ಟುಗಳು ಭರ್ತಿ ಆಗಿವೆ. ಭಾನುವಾರ ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲಿದ್ದಾರೆ. ಆ ನೀರನ್ನು ಕಾಲುವೆ ಮೂಲಕ ನೀರಾವರಿಗೆ ಉಪಯೋಗಿಸಬಹುದು.

ಆದರೆ, ಈ ನೀರು ಎಲ್ಲಾ ರೈತರಿಗೆ ಲಭ್ಯವಾಗುವುದಿಲ್ಲ. ಹೀಗಾಗಿ ಮಳೆ ಕೊರತೆ ಎದುರಿಸುತ್ತಿರುವ ಭಾಗಗಳಿಗೆ ಬರ ಘೋಷಣೆ ಮಾಡಬೇಕಾಗಿದೆ. ಉತ್ತರ ಕರ್ನಾಟಕದಲ್ಲಿ ಮೇವಿನ ಸಮಸ್ಯೆ ತೀವ್ರಗೊಳ್ಳಲಿದೆ. ಬೆಳೆ ನಷ್ಟಉಂಟಾಗುತ್ತಿದ್ದು, ಜನ ಗುಳೆ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಬರ ಪರಿಹಾರ ಕ್ರಮ ಕೈಗೊಳ್ಳಲು ಭಾನುವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಎಂ.ಬಿ. ಪಾಟೀಲ್‌ ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ:  ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿ ಘೋಷಿಸಿಲ್ಲ. ಆದರೆ, ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಶಾಸಕರು, ಮಾಜಿ ಶಾಸಕರು ಕೈಗೊಳ್ಳಬಹುದು ಎಂದು ಚರ್ಚೆಯಾಗಿದೆ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಮತ ಕ್ಷೇತ್ರಕ್ಕೆ ಜಿಲ್ಲೆಗೆ ಸೀಮಿತವಾಗಿ ಮೈತ್ರಿ ಆಗಬೇಕಾಗುತ್ತದೆ. ಮೈತ್ರಿ ಧರ್ಮ ಪಾಲನೆ ಮಾಡುವುದಾಗಿ ಎಚ್‌.ಡಿ. ದೇವೇಗೌಡ ಅವರೂ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

Follow Us:
Download App:
  • android
  • ios