Asianet Suvarna News Asianet Suvarna News

ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಡಿ.ಕೆ ಶಿವಕುಮಾರ್ ಹೇಳಿಕೆ

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿದ ಹೇಳಿಕೆಯೊಂದು ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. 

MB Patil Hit Out DK Shivakumar Over His Lingayat Remark
Author
Bengaluru, First Published Oct 20, 2018, 7:14 AM IST

ಬೆಂಗಳೂರು :  ಐದು ಕ್ಷೇತ್ರಗಳ ಉಪ ಚುನಾವಣೆ ಸಮೀಪವಿರುವ ಈ ಹಂತದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಪಶ್ಚಾತ್ತಾಪದ ನುಡಿಗಳು ಕಾಂಗ್ರೆಸ್‌ನಲ್ಲಿ ತೀವ್ರ ತಳಮಳ ಉಂಟುಮಾಡಿವೆ. ಲಕ್ಷ್ಮೇಶ್ವರದಲ್ಲಿ ಬುಧವಾರ ಶಿವಕುಮಾರ್ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಕಾಂಗ್ರೆಸ್ ಕೈಹಾಕಿದ್ದು ಮಹಾಪರಾಧ ಎಂದು ಹೇಳಿದ್ದಲ್ಲದೆ, ಶುಕ್ರವಾರ ಸದರಿ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ತನ್ಮೂಲಕ ಇದೊಂದು ಪಕ್ಕಾ ತಂತ್ರಗಾರಿಕೆ ಎಂದು ಅವರು ಪರೋಕ್ಷವಾಗಿ  ಸ್ಪಷ್ಟ ಪಡಿಸಿದಂತಾಗಿದೆ. 

ಶಿವಕುಮಾರ್ ಈ ಹೇಳಿಕೆಯು ಹಲವು ಹಕ್ಕಿಗಳನ್ನು ಉರುಳಿಸುವ ದಾಳ ಎಂದೇ ಕಾಂಗ್ರೆಸ್‌ನಲ್ಲಿ ವ್ಯಾಖ್ಯಾ ನಿಸಲಾಗುತ್ತಿದೆ. ಉಪ ಚುನಾವಣೆ ಮಾತ್ರವಲ್ಲದೆ ಅದರ ಅನಂತರದ ರಾಜಕೀಯ ಬೆಳವಣಿಗೆಗಳಲ್ಲೂ ಪ್ರಭಾವ ಬೀರುವ ಸಾಧ್ಯತೆಯನ್ನು ಈ ಹೇಳಿಕೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆಯ ಹಿಂದಿನ ಉದ್ದೇಶ ಮುಖ್ಯವಾಗಿ 

1 ರಾಜ್ಯ ಕಾಂಗ್ರೆಸ್‌ನ ಏಕಮೇವ ನಾಯಕ ಎಂಬ ಪಟ್ಟವನ್ನು ಅಘೋಷಿತವಾಗಿ ಪಡೆದಿರುವ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕತ್ವವಿದೆ ಎಂದು ಬಿಂಬಿಸುವ ಪ್ರಯತ್ನ.

2 ಧರ್ಮದ ಬಗ್ಗೆ ಕಾಂಗ್ರೆಸ್‌ನಿಂದ ದೂರವಿರುವ, ಅಷ್ಟೇ ಅಲ್ಲ ಕಾಂಗ್ರೆಸ್ ಸೋಲಿಗೆ ಯತ್ನ ನಡೆಸುವ ವೀರಶೈವ ಸ್ವಾಮೀಜಿಗಳ ಒಡಲಿಗೆ ತಂಪೆರೆವ ಯತ್ನ 

3 ಬಳ್ಳಾರಿ ಉಪ ಚುನಾವಣೆ ಅಖಾಡದಲ್ಲಿ ನಾಯಕ ವರ್ಸಸ್ ಒಕ್ಕಲಿಗ ಹಾಗೂ ಕ್ಷೇತ್ರದವರು ಹಾಗೂ ಹೊರಗಿನವರು ಎಂದು ಬಿಂಬಿಸಲು ಬಿಜೆಪಿಯ ಶ್ರೀರಾಮುಲು ನಡೆಸಿದ ಪ್ರಯತ್ನದಿಂದ ಜನರ ಗಮನ ಬೇರೆಡೆ ಸೆಳೆಯುವುದು.

4 ರಾಹುಲ್ ಗಾಂಧಿ ಅವರ ಮೃದು ಹಿಂದುತ್ವ ಪ್ರತಿಪಾದನೆಯಂತೆ, ಲಿಂಗಾಯತ- ವೀರಶೈವ ಧರ್ಮ ಒಂದಾಗಿರಬೇಕು ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ಒಂದು ವಲಯ ಪ್ರಬಲ ಪ್ರತಿಪಾದನೆ ಮಾಡುತ್ತಿದೆ ಎಂಬ ಸಂದೇಶ ರವಾನೆಯಾಗುವಂತೆ ಮಾಡುವುದು. 

ಭವಿಷ್ಯದಲ್ಲಿ ಈ ಹೇಳಿಕೆ ಏನೆಲ್ಲ ಪರಿಣಾಮ ಬೀರಬಹುದಾದರೂ ತಕ್ಷ ಣಕ್ಕೆ ಈ ಹೇಳಿಕೆಯ ನೇರ ಪರಿಣಾಮ ಕಾಂಗ್ರೆಸ್‌ನಲ್ಲಿ ಬಿರುಕಿದೆ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾದಂತಾಗಿದೆ. ಶಿವಕುಮಾರ್ ಅವರು ಲಿಂಗಾಯತ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ನಡೆ ಸರಿಯಿರಲಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎನ್ನುವ ನೇರ ಹಾಗೂ ಸರಳ ಹೇಳಿಕೆಗೆ ತಮ್ಮ ಮಾತನ್ನು ನಿಲ್ಲಿಸಿಲ್ಲ. ಬದಲಾಗಿ, ಇದು ಕಾಂಗ್ರೆಸ್ ಮಾಡಿದ ಮಹಾಪರಾಧ. ರಾಜಕಾರಣಿಗಳು ಧರ್ಮದ ವಿಚಾರದಲ್ಲಿ ತಲೆ ಹಾಕಬಾರದು. 

ಕಾಂಗ್ರೆಸ್ ತಲೆಹಾಕಿದ್ದಕ್ಕೆ ಸರಿಯಾಗಿ ದಂಡ ಅನುಭವಿಸಿದ್ದೇವೆ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಈ ನಿರ್ಧಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ತನ್ಮೂಲಕ ಸಿದ್ದರಾಮ್ಯಯ ಅವರ ಈ ನಡೆ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಕಾರಣ ಎಂದು ನೇರವಾಗಿ ಹೇಳಿದಂತಾಗಿದೆ. ಇದು ಸಿದ್ದರಾಮಯ್ಯ ನಾಯಕತ್ವಕ್ಕೆ ಎಸೆದ ಸವಾಲು ಎಂದೇ ಕಾಂಗ್ರೆಸ್‌ನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೆ,  ಕಾಂಗ್ರೆಸ್‌ನಲ್ಲಿ ಇರುವ ಸಿದ್ದರಾಮಯ್ಯ ಅವರ ವಿರೋಧಿಗಳಿಗೆ ಆಶ್ರಯ ನೀಡುವ ಸಂದೇಶವನ್ನು ರವಾನಿಸಿದಂತಾಗಿದೆ. 

ಅದರಿಂದಾಗಿ ಸಮ್ಮಿಶ್ರ ಸರ್ಕಾರದ ನಂತರ ಹಾಗೂ ಸಿದ್ದರಾಮಯ್ಯ ಅವರ ನಂತರದಲ್ಲಿ ಕಾಂಗ್ರೆಸ್‌ನ ಅಗ್ರಪಂಕ್ತಿಯ ನಾಯಕತ್ವಕ್ಕೆ ಪೈಪೋಟಿ ಆರಂಭವಾದರೆ ತಮ್ಮ ಹೆಸರು ಮುಂಚೂಣಿಯಲ್ಲಿ ಇರಲಿ ಎಂಬ ಉದ್ದೇಶ ಈ ಹೇಳಿಕೆಯಲ್ಲಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಬಳ್ಳಾರಿ ಉಪ ಚುನಾವಣೆಯಲ್ಲಿ ಕ್ಷೇತ್ರ ದಲ್ಲಿರುವ ಉತ್ತಮ ಸಂಖ್ಯೆಯ ವೀರಶೈವರ ಮತಗಳು ಕಾಂಗ್ರೆಸ್‌ನ ಪರವಾಗುವಂತೆ ಈ ಹೇಳಿಕೆ ಮಾಡುತ್ತದೆ ಎಂದೇ ಶಿವಕುಮಾರ್ ನಂಬಿದಂತಿದೆ. 

ಇದಕ್ಕಿಂತ ಮಿಗಿಲಾಗಿ ಕಾಂಗ್ರೆಸ್‌ನ ವಿರುದ್ಧ ನಿಲ್ಲುತ್ತಿದ್ದ ವೀರಶೈವ ಮಠಾಧೀಶರ ಸಿಟ್ಟು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಲಿ ಎಂಬ ಉದ್ದೇಶವೂ ಇದ್ದಂತಿದೆ. ಇಷ್ಟಾದಲ್ಲಿ ಭವಿಷ್ಯದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪರ ಲಿಂಗಾಯತರು ನಿಲ್ಲಲು ಕಾರಣವಾಗಬಹುದು  ಎಂಬ ಚಿಂತನೆಯಿರುವಂತೆ ಕಾಣುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬಳ್ಳಾರಿ ಉಪ ಚುನಾವಣೆಯಲ್ಲಿ ನಾಯಕರ ವಿರುದ್ಧ ಕನಕಪುರದ ಗೌಡರು ದಬ್ಬಾಳಿಕೆ ನಡೆಸಲು ಬರುತ್ತಿದ್ದಾರೆ ಎಂಬ ಪ್ರಚಾರವನ್ನು ಆರಂಭಿಸಿದ್ದ ಶ್ರೀರಾಮುಲು ಅವರ ತಂತ್ರಕ್ಕೆ ಪ್ರತಿತಂತ್ರ ಹೂಡುವ ಯತ್ನವಿದು ಎಂದು ಹೇಳಲಾಗುತ್ತಿದೆ. 

ಕ್ಷೇತ್ರದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ನಾಯಕರ ವಲಯದಲ್ಲಿ ಶ್ರೀರಾಮುಲು ಅವರು ಶಿವಕುಮಾರ್ ವಿರುದ್ಧ ನಡೆಸುತ್ತಿದ್ದ ಪ್ರಚಾರ ಉತ್ತವವಾಗಿಯೇ ಕೆಲಸ ಮಾಡುತ್ತಿತ್ತು. ಇದಕ್ಕೆ ಸಂವಾದಿಯಾಗಿ ಕಾಂಗ್ರೆಸ್‌ನ ನಾಯಕ ಸಮುದಾಯದ ನಾಯಕರಾದ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಬಳ್ಳಾರಿ ಉಪ ಚುನಾವಣೆ ಬಗ್ಗೆ ಮುಗುಂ ಆಗಿ ಉಳಿದದ್ದು ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡಿತ್ತು.

ಶ್ರೀರಾಮುಲು ಅವರ ಈ ಜಾತಿ ತಂತ್ರದಿಂದ ಜನರ ಗಮನ ಬೇರೆಡೆ ಸೆಳೆಯುವಂತೆ ಮಾಡುವಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಯಶಸ್ವಿಯಾಗುತ್ತದೆ ಎಂಬ ಭಾವನೆ ಶಿವಕುಮಾರ್ ಅವರಿಗೆ ಇದ್ದಂತಿದೆ.

Follow Us:
Download App:
  • android
  • ios