ಭೋಪಾಲ್ : ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ತಯಾರಿಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಮಹಾ ಘಟಬಂಧನ್ ಗೆ ಬಹುಜನ ಸಮಾಜವಾದಿ ಪಾರ್ಟಿ ಶಾಕ್ ನೀಡಿದೆ. 

ಮಧ್ಯ ಪ್ರದೇಶದಲ್ಲಿ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ತಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ಬಿಎಸ್ ಪಿ ಉಪಾಧ್ಯಕ್ಷ ರಾಮ್ ಜಿ ಗೌತಮ್ ಹೇಳಿದ್ದಾರೆ. ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಾಗುತ್ತದೆ ಎಂದಿದ್ದಾರೆ.

ಮಧ್ಯ ಪ್ರದೇಶದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಮಾಯಾವತಿ ಈ ನಿರ್ಧಾರ ಕೈಗೊಂಡಿದ್ದಾರೆ. 

ಕಳೆದ ಅಕ್ಟೋಬರ್ ನಲ್ಲಿಯೇ ಮೈತ್ರಿ ಬಗ್ಗೆ ಮಾತನಾಡಿದ್ದ ಮಾಯಾವತಿ ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದ ವೇಳೆ ಕಾಂಗ್ರೆಸ್ ಗೆ  ತಮ್ಮ ಬೆಂಬಲ ನೀಡಿ ಸರ್ಕಾರ ರಚಿಸಲು ನೆರವಾಗಿದ್ದರು. 

ಆದರೆ ಇದೀಗ ಲೋಕಸಭಾ ಚುನಾವಣೆಗೆ ಮಾತ್ರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದು, ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. 

ಸದ್ಯ ಪಂಚರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸತತ ಯತ್ನ ನಡೆಸಿದೆ. ವಿಪಕ್ಷಗಳನ್ನೆಲ್ಲಾ ಒಗ್ಗೂಡಿಸಿ ಮಹಾಘಟ ಬಂಧನ್ ರಚಿಸಿ ಅಧಿಕಾರಕ್ಕೇರುವ ಯತ್ನ ನಡೆಸುತ್ತಿದೆ. ಆದರೆ ಮಾಯಾವತಿ ಈ ನಿರ್ಧಾರದಿಂದ ಯುಪಿಎಗೆ ಕೊಂಚ ಹಿನ್ನಡೆಯಾದಂತಾಗಿದೆ.