ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ವಿರುದ್ಧ ದೂರು ದಾಖಲಾಗಿದೆ. ಆನ್‌ಲೈನ್ ಹಣಕಾಸು ಪಾವತಿ ಸೇವೆ ಒದಗಿಸುವ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ಅಮೆರಿಕ ಸರ್ಕಾರಕ್ಕೆ ದೂರು ನೀಡಿದೆ.
ನವದೆಹಲಿ: ಆನ್‌ಲೈನ್ ಹಣಕಾಸು ಪಾವತಿ ಸೇವೆ ಒದಗಿಸುವ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ಅಮೆರಿಕ ಸರ್ಕಾರಕ್ಕೆ ದೂರು ನೀಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಅವರ ರಕ್ಷಣಾತ್ಮಕ ಆರ್ಥಿಕ ನೀತಿಯಿಂದಾಗಿ ನಮ್ಮ ವ್ಯವಹಾರ ವೃದ್ಧಿಗೆ ಅಡ್ಡಿಯಾಗಿದೆ ಎಂದು ಅದು ತನ್ನ ದೂರಿನಲ್ಲಿ ಹೇಳಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರು ಬಹುವಾಗಿ ಉತ್ತೇಜಿಸುವುದು ಸ್ವಾಗತಾರ್ಹ. ಆದರೆ ಇದೇ ವೇಳೆ ಅವರು ರಾಷ್ಟ್ರೀಯತೆಯ ಹೆಸರಲ್ಲಿ, ಭಾರತದ್ದೇ ಆದ ರು ಪೇ ಕಾರ್ಡ್‌ನ ಬಗ್ಗೆ ಹೆಚ್ಚಿನ ಅವರು ಪ್ರಚಾರ ಮಾಡುತ್ತಿದ್ದಾರೆ. ರು ಪೇ ಕಾರ್ಡ್ ಬಳಸುವುದು ದೇಶ ಸೇವೆ ಮಾಡಿದಂತೆ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಆದರೆ ರಾಷ್ಟ್ರೀಯತೆ ಹೆಸರಲ್ಲಿ ಅವರು ರು ಪೇ ಕಾರ್ಡ್ ಬಳಕೆಗೆ ಉತ್ತೇಜನ ನೀಡುವ ಮೂಲಕ ರಕ್ಷಣಾತ್ಮಕ ಆರ್ಥಿಕ ನೀತಿಯನ್ನು ಪಾಲಿಸುತ್ತಿದ್ದಾರೆ. ಇದರಿಂದಾಗಿ ಅಮೆರಿಕ ಮೂಲದ ಪಾವತಿ ಸೇವಾ ಕಂಪನಿಗಳ ಸೇವಾ ವಿಸ್ತರಣೆಗೆ ಅಡ್ಡಿಯಾಗುತ್ತಿದೆ ಎಂದು ಅಮೆರಿಕದ ವಾಣಿಜ್ಯ ಸಂಘಟನೆ (ಯುಎಸ್‌ಟಿಆರ್)ಗೆ ಕಳೆದ ಜೂನ್ ತಿಂಗಳಿನಲ್ಲಿ ನೀಡಿದ ದೂರಿನಲ್ಲಿ ತಿಳಿಸಿದೆ.
ಮೋದಿ ಕರೆ: ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿ ಅವರು ಸಾರ್ವಜನಿಕ ಸಮಾರಂಭದಲ್ಲೇ ಭಾರತದ್ದೇ ಆದ ರು ಪೇ ಕಾರ್ಡ್ ಬಳಕೆಗೆ ಕರೆ ನೀಡಿದ್ದರು. ಭಾರತೀಯರು ರು ಪೇ ಕಾರ್ಡ್ ಬಳಸಿದರೆ, ವಹಿವಾಟು ಶುಲ್ಕ ಭಾರತದಲ್ಲೇ ಉಳಿಯಲಿದೆ. ಈ ಹಣ ಭಾರತದಲ್ಲಿ ಶಾಲೆ, ರಸ್ತೆ ನಿರ್ಮಾಣಕ್ಕೆ ಬಳಕೆಯಾಗುತ್ತದೆ ಎಂದು ಕರೆ ನೀಡಿದ್ದರು.
ನಂ.1: 2012ರಲ್ಲಿ ಭಾರತ ಸರ್ಕಾರದಿಂದ ಪರಿಚಯಿಸಲ್ಪಟ್ಟಿದ್ದ ರು ಪೇ ಕಾರ್ಡ್ ಇದೀಗ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ. ಹಾಲಿ ದೇಶದಲ್ಲಿ 51 ಕೋಟಿಗೂ ಹೆಚ್ಚಿನ ರು ಪೇ ಕಾರ್ಡ್‌ಗಳು ಬಳಕೆಯಲ್ಲಿವೆ. 2017ರಲ್ಲಿ ಅಮೆರಿಕದ ವೀಸಾ ಕಾರ್ಡನ್ನು ಹಿಂದಿಕ್ಕಿ ರು ಪೇ ಮೊದಲ ಸ್ಥಾನಕ್ಕೆ ಏರಿತ್ತು.
ಕಾರ್ಡ್ ವ್ಯವಹಾರ: ಬ್ಯಾಂಕ್‌ಗಳು ಗ್ರಾಹಕರಿಗೆ ವಿತರಿಸುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಯಾವುದಾದರೂ ಎಟಿಎಂ ಅಥವಾ ಅಂಗಡಿಗಳಲ್ಲಿ ಹಣ ಪಾವತಿ ಅಥವಾ ಹಣ ಪಡೆಯಲು ಬಳಸಲಾಗುತ್ತದೆ. ಹೀಗೆ ಒಂದು ಬ್ಯಾಂಕ್‌ನ ಕಾರ್ಡ್ ಅನ್ನು ಇನ್ನೊಂದು ಬ್ಯಾಂಕಿನ ಎಟಿಎಂನಲ್ಲಿ ಬಳಸಿದಾಗ, ಎರಡೂ ಬ್ಯಾಂಕ್‌ಗಳ ನಡುವಿನ ಹಣಕಾಸು ವ್ಯವಹಾರವನ್ನು ಕಾರ್ಡ್ ನೀಡಿರುವ ವೀಸಾ, ಮಾಸ್ಟರ್‌ಕಾರ್ಡ್ ಅಥವಾ ರುಪೇ ನಿರ್ವಹಿಸುತ್ತದೆ. ಇದಕ್ಕಾಗಿ ಅವುಗಳಿಗೆ ಭಾರೀ ಶುಲ್ಕ ನೀಡಬೇಕು. ರು ಪೇ ಬಿಡುಗಡೆ ಆಗುವವರೆಗೂ ಈ ಶುಲ್ಕ ಅಮೆರಿಕದ ಪಾಲಾಗುತ್ತಿತ್ತು. ರು ಪೇ ಆರಂಭದ ಬಳಿಕ ಆ ಹಣ ಭಾರತದಲ್ಲೇ ಉಳಿಯುವಂತೆ ಆಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 3, 2018, 8:36 AM IST