Asianet Suvarna News Asianet Suvarna News

ಹಿಂದೂಗಳ ಪರ ಹೋರಾಡಲು ನೆಹರೂ ಸಂಪುಟಕ್ಕೆ ಗುಡ್‌ಬೈ ಹೇಳಿದ್ರು ಶ್ಯಾಮ್‌ಪ್ರಸಾದ್‌ ಮುಖರ್ಜಿ!

ಕಾಶ್ಮೀರವನ್ನು ಪೂರ್ಣವಾಗಿ ಭಾರತದಲ್ಲಿ ಸೇರಿಸಲು ಹೋರಾಡಿದ ಮೊದಲಿಗ ಮುಖರ್ಜಿ  | ಹಿಂದೂಗಳ ಪರ ಹೋರಾಡಲು ನೆಹರೂ ಸಂಪುಟಕ್ಕೆ ಗುಡ್‌ಬೈ ಹೇಳಿದ್ದ ಶ್ಯಾಮ್‌ಪ್ರಸಾದ್‌ | ಕಾಶ್ಮೀರಕ್ಕೂ ಬಿಜೆಪಿಗೂ ಅವಿನಾಭಾವ ನಂಟು

Martyrdom of Dr Shyama Prasad Mukherjee for complete integration of Jammu Kashmir honored
Author
Bengaluru, First Published Aug 6, 2019, 9:08 AM IST
  • Facebook
  • Twitter
  • Whatsapp

ನವದೆಹಲಿ (ಆ. 06): ಜಮ್ಮು- ಕಾಶ್ಮೀರ ಜೊತೆ ಬಿಜೆಪಿ ಅವಿನಾಭಾವ ಸಂಬಂಧ ಹೊಂದಿದೆ. ಈ ಸಂಬಂಧಕ್ಕೆ ಕಾರಣರಾದವರು ಜನಸಂಘದ ಸ್ಥಾಪಕ ಶ್ಯಾಮ್‌ಪ್ರಸಾದ್‌ ಮುಖರ್ಜಿ.

ಸ್ವಾತಂತ್ರ್ಯ ಬಂದು 5 ವರ್ಷಗಳ ಬಳಿಕ 1952ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆಗಳು ಆರಂಭವಾದವು. ಅಂದಿನ ಮುಖ್ಯಮಂತ್ರಿ ಆಗಿದ್ದ ಶೇಖ್‌ ಅಬ್ದುಲ್ಲಾ, ಪ್ರಧಾನಿ ನೆಹರೂ ಹಾಗೂ ಕೇಂದ್ರದ ಹಿರಿಯ ಸಚಿವರ ಭೇಟಿಯಾಗಿ ತಮ್ಮ ಬೇಡಿಕೆ ಇಟ್ಟಿದ್ದರು. ಅದರಂತೆ ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತೆ ನೀಡುವ ಕರಡು ಸಿದ್ಧವಾಯಿತು.

ದೇಶದ ರಾಷ್ಟ್ರ ಧ್ವಜದ ಜೊತೆಗೆ ಜಮ್ಮು- ಕಾಶ್ಮೀರದ ರಾಷ್ಟ್ರಧ್ವಜವನ್ನೂ ಸಮಾನಾಂತರವಾಗಿ ಹಾರಿಸಲು ಒಪ್ಪಲಾಯಿತು. ರಾಜ್ಯದ ಅನುಮತಿ ಇಲ್ಲದೇ ಭಾರತ ಸರ್ಕಾರ ಕಾಶ್ಮೀರಕ್ಕೆ ಸೇನೆ ಕಳುಹಿಸಲು ಅವಕಾಶ ನಿರಾಕರಿಸಲಾಯ್ತು. ಹೊರಗಿನವರಿಗೆ ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ನಿರ್ಬಂಧ ಹೇರಲಾಯ್ತು. ಆದರೆ, ಶೇಖ್‌ ಅಬ್ದುಲ್ಲಾ ಇನ್ನೂ ಹೆಚ್ಚಿನದ್ದನ್ನು ಬಯಸಿದ್ದರು. ಭಾರತ ಸರ್ಕಾರಕ್ಕೆ ಜಮ್ಮು ಕಾಶ್ಮೀರದ ಮೇಲೆ ಎಷ್ಟುಹಕ್ಕಿದೆ ಎನ್ನುವುದನ್ನು ರಾಜ್ಯ ಸರ್ಕಾರವೇ ನಿರ್ಧರಿಸಲಿದೆ ಎಂದು ಘೋಷಿಸಿಕೊಂಡಿದ್ದರು.

ಈ ನಡುವೆ ಸ್ಥಳೀಯ ಮುಖಂಡ ಪ್ರೇಮ್‌ ನಾಥ್‌ ದೋಗ್ರಾ ಅವರ ನೇತೃತ್ವದಲ್ಲಿ 1949ರಲ್ಲಿ ಸ್ಥಾಪನೆಯಾದ ಪ್ರಜಾ ಪರಿಷದ್‌, ಹಿಂದೂಗಳ ಧ್ವನಿಯಾಗಿ ಹೊರಹೊಮ್ಮಿತು. ಹೀಗಾಗಿ ಈ ರಾಜಕೀಯ ಪಕ್ಷವನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ಹಿಂದೂಗಳ ಆಕ್ರೋಶ ದೇಶದೆಲ್ಲಡೆ ಪ್ರತಿಧ್ವನಿಸಿತು.

ಕಾಶ್ಮೀರದಲ್ಲಿ ಹಿಂದೂಗಳಿಗೆ ಎದುರಾದ ಪರಿಸ್ಥಿತಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತು. ನೆಹರು ಅವರ ಸಂಪುಟದಲ್ಲಿ ಸಚಿವ ಸ್ಥಾನವನ್ನು ತ್ಯಜಿಸಿ ಜಮ್ಮು- ಕಾಶ್ಮೀರದಲ್ಲಿ ಹಿಂದೂಗಳ ಪರ ಹೋರಾಟಕ್ಕೆ ಧುಮುಕಿದರು. 1951 ಅಕ್ಟೋಬರ್‌ 21ರಂದು ಜನಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಹೊಸ ಪಕ್ಷ 1952ರ ಚುನಾವಣೆಯಲ್ಲಿ ಸ್ಪರ್ಧಿಸಿತು. ಆದರೆ, ಸಂಸತ್ತಿನಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು.

ಸಂಸತ್ತಿನಲ್ಲಿ ಜಮ್ಮು- ಕಾಶ್ಮೀರದ ವಿಷಯವಾಗಿ ಕೇಂದ್ರ ಕೈಗೊಂಡ ಯೋಜನೆಗಳನ್ನು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಕಟುವಾಗಿ ಟೀಕಿಸಿದರು. ಶೇಕ್‌ ಅಬ್ದುಲ್ಲಾರನ್ನು ಸರ್ವಾಧಿಕಾರಿಯನ್ನಾಗಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು. ಕಾಶ್ಮೀರಕ್ಕೆ ಯಾವುದೇ ವಿಶೇಷ ಸ್ಥಾನಮಾನ ನೀಡುವ ಅಗತ್ಯವಿಲ್ಲ. ಇತರ ರಾಜ್ಯಗಳಂತೆ ಭಾರತದ ಸಮಗ್ರ ಅಂಗವಾಗಬೇಕು ಎಂದು ಒತ್ತಾಯಿಸಿದ್ದರು.

1953ರ ಜನವರಿಯಲ್ಲಿ ನೆಹರೂ ಅವರಿಗೆ ಪತ್ರ ಬರೆದಿದ್ದ ಮುಖರ್ಜಿ, ಪಾಕ್‌ ಆಕ್ರಮಿತ ಕಾಶ್ಮೀರವನ್ನು ಪುನಃ ವಶಪಡಿಸಿಕೊಂಡು ಅದನ್ನು ಭಾರತದ ಭಾಗವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಒಂದು ವೇಳೆ ಭಾರತ ತನ್ನ ಪ್ರದೇಶವನ್ನು ವಶಪಡಿಸಿಕೊಳ್ಳಲು ವಿಫಲವಾದರೆ ಅದೊಂದು ರಾಷ್ಟ್ರೀಯ ಅವಮಾನ ಎಂದು ಹೇಳಿದ್ದರು. ಪ್ರಜಾ ಪರಿಷದ್‌ ಅನ್ನು ಹತ್ತಿಕ್ಕುವ ಪ್ರಯತ್ನವನ್ನು ನಿಲ್ಲಿಸುವಂತೆ ಶೇಖ್‌ ಅಬ್ದುಲ್ಲಾಗೆ ಸೂಚನೆ ನೀಡುವಂತೆಯೂ ನೆಹರೂ ಅವರನ್ನು ಕೋರಿದ್ದರು.

ಆದರೆ, ನೆಹರೂ ಹಾಗೂ ಶೇಖ್‌ ಅಬ್ದುಲ್ಲಾ ಅವರ ಮನವೊಲಿಸಲು ಮುಖರ್ಜಿವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಮುಖರ್ಜಿ ಪ್ರತಿಭಟನೆಯನ್ನು ದೆಹಲಿಗೆ ಒಯ್ದರು. ಜನಸಂಘ, ಹಿಂದೂ ಮಹಾಸಭಾ ಮತ್ತು ರಾಮರಾಜ್ಯ ಪರಿಷದ್‌ ಕಾರ್ಯಕರ್ತರು ದೆಹಲಿಯ ಬೀದಿ ಬೀದಿಗಳಲ್ಲಿ ಸತ್ಯಾಗ್ರಹ ನಡೆಸಿದರು.

1953 ರ ಏಪ್ರಿಲ್‌ನಲ್ಲಿ ಪ್ರತಿಭಟನಾ ನಿರತ ಸಾವಿರಾರು ಹೋರಾಟಗಾರರನ್ನು ಬಂಧಿಸಲಾಯಿತು. ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರನ್ನು ಬಂಧಿಸಿದ ಪೊಲೀಸರು ಶ್ರೀನಗರದ ಜೈಲಿನಲ್ಲಿ ಇಟ್ಟಿದ್ದರು. 1953 ಜೂ.23ರಂದು ಜೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಜಮ್ಮು- ಕಾಶ್ಮೀರ ಭಾರತದ ಸಮಗ್ರ ಭಾಗವಾಗಬೇಕು ಎಂಬ ಗುರಿಯನ್ನು ಹೊಂದಲು ಬಿಜೆಪಿಗೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಹೋರಾಟವೇ ಹಾಗೂ ಅವರ ಬಲಿದಾನ ಪ್ರೇರಣೆಯಾಗಿದೆ.

Follow Us:
Download App:
  • android
  • ios