ಮಂಡ್ಯ (ಫೆ. 21):  ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಬುಧವಾರ ಒಂದೇ ದಿನ 10 ಲಕ್ಷಕ್ಕೂ ಹೆಚ್ಚಿನ ಪರಿಹಾರ ದೊರೆತಿದೆ.

ಮದ್ದೂರು ತಾಲೂಕಿನ ಗುಡಿಗೆರೆ ಕಾಲೋನಿಯಲ್ಲಿರುವ ಗುರು ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಗುರು ಅವರ ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ ಹಾಗೂ ತಂದೆ ಹೊನ್ನಯ್ಯರಿಗೆ ಸಾಂತ್ವನ ಹೇಳಿದರು. ಕೆಪಿಸಿಸಿ ವತಿಯಿಂದ 5 ಲಕ್ಷ ಪರಿಹಾರ ನೀಡಿದರು. ಈ ವೇಳೆ ಮಾಜಿ ಶಾಸಕರಾದ ಚಲುವರಾಯಸ್ವಾಮಿ, ಪಿ.ನರೇಂದ್ರಸ್ವಾಮಿ, ಮಧು ಜಿ ಮಾದೇಗೌಡ ಸೇರಿದಂತೆ ಅನೇಕ ಮುಖಂಡರಿದ್ದರು.

ಇದೇ ವೇಳೆ ಮನ್‌ಮುಲ್‌ (ಮಂಡ್ಯ ಜಿಲ್ಲಾ ಹಾಲು ಒಕ್ಕೂಟ)ನಿಂದ 3 ಲಕ್ಷ, ಮಂಡ್ಯ ಜಿಲ್ಲಾ ಸಹಕಾರಿ ಬ್ಯಾಂಕ್‌ ವತಿಯಿಂದ .2 ಲಕ್ಷದ ಚೆಕ್‌ ಅನ್ನು ಹಸ್ತಾಂತರಿಸಲಾಯಿತು. ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಜನತೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಾಂತ್ವನ ಹೇಳುವ ಜತೆಗೆ, ಸಾಕಷ್ಟುಧನಸಹಾಯ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಮಂಡ್ಯ ನಗರದಲ್ಲಿ ಗೋಪಿ ಮಂಚೂರಿ ವ್ಯಾಪಾರ ಮಾಡುವ ಉಪ್ಪಿ ಗೋವಿಂದು ತಮ್ಮ ಒಂದು ದಿನದ ಸಂಪಾದನೆ .10 ಸಾವಿರವನ್ನು ನೀಡಿದರು. ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು .50 ಸಾವಿರ ಧನ ಸಹಾಯ ಮಾಡಿದರು.