ಮಡಿಕೇರಿ (ಆ. 21):  ‘ಮಗಳ ಮದುವೆಗೆ ಇನ್ನು ಐದು ದಿನ ಮಾತ್ರ ಉಳಿದಿದೆ. ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೆವು. ಮಕ್ಕಂದೂರಿನ ಹಾಲ್‌ ಬುಕ್‌ ಮಾಡಿದ್ದೆವು. ಆಹ್ವಾನ ಪತ್ರ ಹಂಚಿದ್ದೆವು. ಕೂಲಿ ಮಾಡಿ, ಸಾಲಸೋಲ ಮಾಡಿ ತೆಗೆದಿದ್ದ ಚಿನ್ನ, ವಸ್ತ್ರ ಮನೆಯೊಳಗೆ ಇದೆಯೋ ಎಂಬುದೂ ಗೊತ್ತಿಲ್ಲ. ಎಲ್ಲವೂ ನೀರುಪಾಲಾದ ಬಳಿಕ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ’

-​​ಇದು ಮಡಿಕೇರಿಯ ಪರಿಹಾರ ಕೇಂದ್ರದಲ್ಲಿ ತಂಗಿರುವ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದ ಬಡ ವೃದ್ಧೆಯೊಬ್ಬರ ಕಣ್ಣೀರ ಕತೆ. ಪರಿಹಾರ ಕೇಂದ್ರಗಳಿಗೆ ಕಾಲಿಟ್ಟರೆ ದಿಕ್ಕುತೋಚದೆ ಕಂಗೆಟ್ಟಇಂತಹ ಹಲವು ಕುಟುಂಬಗಳು ಕಾಣಸಿಗುತ್ತವೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ರಾಟೆಮನೆ ಪೈಸಾರಿಯ ವೃದ್ಧೆ ಬೇಬಿ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆ.26ರಂದು ತಮ್ಮ ಮಗಳನ್ನು ಧಾರೆಯೆರೆಯಬೇಕಿತ್ತು. ಇದೀಗ ಸರ್ವಸ್ವವನ್ನೂ ಕಳೆದುಕೊಂಡಿರುವ ಅವರು ಮಗಳ ಮದುವೆಗೆ ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ಕನ್ನಡಪ್ರಭ ಪ್ರತಿನಿಧಿಯೊಂದಿಗೆ ಅಳಲು ತೋಡಿಕೊಂಡ ಅವರು, ನನ್ನ ಮಗಳು ಮಂಜುಳಾಗೆ ಕೇರಳದ ಹುಡುಗನೊಂದಿಗೆ ಆ.26ರಂದು ಮದುವೆ ನಿಶ್ಚಯ ಮಾಡಲಾಗಿತ್ತು. ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಮದುವೆಗಾಗಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದೆ. ಆದರೆ ಈಗ ನಮ್ಮ ಮನೆಯೇ ಇಲ್ಲ. ಇದೀಗ ಮದುವೆಗೆ ಐದು ದಿನಗಳು ಮಾತ್ರ ಉಳಿದಿವೆ. ಈಗ ಕೈಯಲ್ಲಿ ಹತ್ತು ಪೈಸೆಯಷ್ಟೂದುಡ್ಡಿಲ್ಲ, ಬದುಕಲು ಮನೆಯೂ ಇಲ್ಲ. ಹೇಗೆ ಮದುವೆ ಮಾಡುವುದು ಎಂಬುದು ತೋಚುತ್ತಿಲ್ಲ ಎಂದು ವ್ಯಕ್ತಪಡಿಸಿದರು.

ಮಗಳ ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗಿತ್ತು. ಮಕ್ಕಂದೂರಿನ ಸಭಾಂಗಣವನ್ನು ಕಾಯ್ದಿರಿಸಲಾಗಿತ್ತು. ನಮ್ಮ ಎಲ್ಲಾ ಕುಟುಂಬಸ್ಥರಿಗೆ ಆಹ್ವಾನ ಪತ್ರಿಕೆಯನ್ನು ಹಂಚಲಾಗಿತ್ತು. ಆರು ಪವನ್‌ ಚಿನ್ನ, ಮದುವೆಗೆ ಬೇಕಾದ ಬಟ್ಟೆಬರೆಯನ್ನು ತೆಗೆದಿದ್ದೆವು. ಆದರೆ ಈಗ ಮನೆ ಇದೆಯೋ, ಇಲ್ಲವೋ? ಎಂಬುದು ಗೊತ್ತಿಲ್ಲ. ಮಗಳ ಮದುವೆಗೆ ನಾನು ಏನು ಮಾಡಬೇಕು? ಎನ್ನುತ್ತಾರೆ ಅವರು.

ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದವು. ಹಾಕಿದ ಬಟ್ಟೆಯಲ್ಲೇ ಮನೆಯಿಂದ ಬಂದಿದ್ದೇವೆ. ಅಲ್ಲಿಂದ ಏನನ್ನೂ ತೆಗೆದುಕೊಂಡು ಬಂದಿಲ್ಲ. ಇಲ್ಲಿನ ಪರಿಸ್ಥಿತಿ ಅರಿತು ಮದುವೆ ಬಗ್ಗೆ ಮೂರು ದಿನದಲ್ಲಿ ವರನ ಕಡೆಯವರಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದೇವೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಮದುವೆಯೇ ಬೇಡ ಅನ್ನಿಸುತ್ತಿದೆ ಎಂದು ಮದುವೆಗೆ ಸಜ್ಜಾಗಿದ್ದ ಭಾವಿ ವಧು ಮಂಜುಳಾ ಬೇಸರ ವ್ಯಕ್ತಪಡಿಸಿದರು.