ನವದೆಹಲಿ(ಸೆ.10) ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಲಿರುವ ಏಕತೆಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 31ರಂದು ಲೋಕಾರ್ಪಣೆ ಮಾಡಲಿದ್ದಾರೆ.

182 ಮೀಟರ್ ಎತ್ತರದ ಈ ಪ್ರತಿನೆಯು ದೇಶದ ಏಕತೆ ಮತ್ತು ಸಮಗ್ರತೆಯ ಚಿಹ್ನೆಯಾಗಿದ್ದು, ಇದನ್ನು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನಾಚರಣೆಯೆಂದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ತಿಳಿಸಿದ್ದಾರೆ.

2013ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ರ ಪ್ರತಿಮೆ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದರು. ಅಲ್ಲದೆ ಪ್ರತಿಮೆ ನಿರ್ಮಾಣಕ್ಕೆ ದೇಶದಾದ್ಯಂತ ಕಬ್ಬಿಣ, ಮರಳು ಮತ್ತು ನೀರನ್ನು ಸಂಗ್ರಹಿಸಿದ್ದರು. ನಾಗರಿಕರು ಇದಕ್ಕೆ ಸ್ಪಂದಿಸಿದ್ದರು.

ನರೇಂದ್ರ ಮೋದಿ ಅವರು ಇದನ್ನು ಘೋಷಣೆ ಮಾಡಿದಾಗ ವಿಪಕ್ಷಗಳ ಟೀಕೆಗೂ ಗುರಿಯಾಗಿದ್ದರು. ಭಾರತದ ಮೊದಲ ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಪಟೇಲ್ ಅವರ ಚಿಂತನೆಗಳನ್ನು ಜೀವಂತವಾಗಿಡಲು ಈ ಪ್ರತಿಮೆಯನ್ನು ಆದರ್ಶವಾಗಿ ಇಟ್ಟುಕೊಳ್ಳಲಾಗುತ್ತದೆ.