ಸಾಹಿತಿ ಯೋಗೇಶ್‌ ಮಾಸ್ಟರ್‌ ಅವರಿಗೆ ಮೊದಲ ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೋ ಏನೋ ಅದೇ ದೊಡ್ಡ ಭಾರವಾಗಿದೆ ಎಂಬುದು ಸಿನಿಮಾ ನೋಡಿದಾಗ ಅರ್ಥವಾಗುತ್ತದೆ. ಆದರೂ ಅವರು ಕಾದಂಬರಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. ಹೀಗಾಗಿ ಸಿನಿಮ್ಯಾಟಿಕ್‌ ತಿರುವುಗಳು, ಅಬ್ಬರದ ಹಿನ್ನೆಲೆ ಸಂಗೀತ, ಮೆಲೋಡ್ರಾಮಾ ಹೀಗೆ ಯಾವುದೇ ನೆರಳೂ ಇಣುಕಲು ಬಿಟ್ಟಿಲ್ಲ. ಅಷ್ಟರ ಮಟ್ಟಿಗೆ ಯೋಗೇಶ್‌ ಮಾಸ್ಟರ್‌ ಕಾದಂಬರಿಕಾರನಾಗಿ ಸಿನಿಮಾದಲ್ಲೂ ಗೆದ್ದಿದ್ದಾರೆ! 

ಚಿತ್ರ: ಮರಳಿ ಮನೆಗೆ
ನಿರ್ದೇಶನ: ಯೋಗೇಶ್‌ ಮಾಸ್ಟರ್‌
ತಾರಾಗಣ: ಶಂಕರ್‌ ಆರ್ಯನ್‌, ಶ್ರುತಿ, ಸುಚೇಂದ್ರ ಪ್ರಸಾದ್‌, ಸಹನಾ ದ್ವಾರಕನಾಥ್‌, ಅರುಧಂತಿ ಜಟ್ಕರ್‌, ಅನಿರುದ್‌್ಧ ಜಟ್ಕರ್‌, ರೋಹಿತ್‌ ನಾಗೇಶ್‌, ಪದ್ಮಾ ಶಿವಮೊಗ್ಗ, ಗೌರಿ ಲಂಕೇಶ್‌
ನಿರ್ಮಾಣ: ಎಸ್‌ ಎನ್‌ ಲಿಂಗೇಗೌಡ, ಸುಭಾಷ್‌ ಎಲ್‌. ಗೌಡ
ಸಂಗೀತ: ಯೋಗೇಶ್‌ ಮಾಸ್ಟರ್‌, ಗುರುಮೂರ್ತಿ ವೈದ್ಯ
ಛಾಯಾಗ್ರಾಹಣ: ರಾಜ್‌ ಶಿವಶಂಕರ್‌
ರೇಟಿಂಗ್‌: *** 


ಕತೆ, ಕಾದಂಬರಿ, ಕವಿತೆ ಹೀಗೆ ಸಾಹಿತ್ಯದ ಯಾವುದೇ ಪ್ರಕಾರವು ಓದುವಾಗ ದೃಶ್ಯ ಮಾಧ್ಯಮದಂತೆ ಎಲ್ಲವೂ ಕಣ್ಣಿಗೆ ಕಟ್ಟಿದಂತಿದ್ದರೂ ಪರವಾಗಿಲ್ಲ. ಆದರೆ, ಸಿನಿಮಾ ನೋಡುವಾಗ ದೃಶ್ಯವಾಗಿಯೇ ಕಾಣಬೇಕೇ ಹೊರತು ಪಠ್ಯದಂತೆ ಭಾಸವಾಗಬಾರದು. ಇದು ಸಿನಿಮಾ ಜಗತ್ತೇ ಹಾಕಿಕೊಂಡಿರುವ ನಿಯಮ. ಕಾದಂಬರಿ ಆಧಾರಿತ ಸಿನಿಮಾಗಳನ್ನು ಮಾಡುವವರಿಗೆ ಅಕ್ಷರ ಮತ್ತು ದೃಶ್ಯ ಮಾಧ್ಯಮದ ನಡುವಿನ ಈ ವ್ಯತ್ಯಾಸ ಮತ್ತು ಅಂತರ ಒಂದು ಸವಾಲಾಗಿ ಕಾಡುತ್ತದೆ.

ಸಾಹಿತಿ ಯೋಗೇಶ್‌ ಮಾಸ್ಟರ್‌ ಅವರಿಗೆ ಮೊದಲ ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೋ ಏನೋ ಅದೇ ದೊಡ್ಡ ಭಾರವಾಗಿದೆ ಎಂಬುದು ಸಿನಿಮಾ ನೋಡಿದಾಗ ಅರ್ಥವಾಗುತ್ತದೆ. ಆದರೂ ಅವರು ಕಾದಂಬರಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. ಹೀಗಾಗಿ ಸಿನಿಮ್ಯಾಟಿಕ್‌ ತಿರುವುಗಳು, ಅಬ್ಬರದ ಹಿನ್ನೆಲೆ ಸಂಗೀತ, ಮೆಲೋಡ್ರಾಮಾ ಹೀಗೆ ಯಾವುದೇ ನೆರಳೂ ಇಣುಕಲು ಬಿಟ್ಟಿಲ್ಲ. ಅಷ್ಟರ ಮಟ್ಟಿಗೆ ಯೋಗೇಶ್‌ ಮಾಸ್ಟರ್‌ ಕಾದಂಬರಿಕಾರನಾಗಿ ಸಿನಿಮಾದಲ್ಲೂ ಗೆದ್ದಿದ್ದಾರೆ! 

‘ಮರಳಿ ಮನೆಗೆ' ಚಿತ್ರ ನೈಜತೆಯ ಬೆಳಕಿನಲ್ಲಿ ತೀರಾ ಸಾಧಾರಣವಾಗಿ ಸಾಗಿದಂತೆ ಕಂಡರೂ ಇಡೀ ಸಿನಿಮಾ ನಿಂತಿರುವುದು ಭಾವುಕತೆಯಲ್ಲಿ. ಪ್ರತಿ ಪಾತ್ರವೂ ಬದುಕು, ಸಂಬಂಧಗಳ ಮಹತ್ವವನ್ನು ಸಾರುತ್ತವೆ. ಈ ಕಾರಣಕ್ಕೆ ಉಳಿದೆಲ್ಲ ಕೊರತೆಗಳ ನಡುವೆ ಈ ಸಿನಿಮಾ ಒಂದು ಕತೆಯಾಗಿ ನೋಡುಗನ ಮನಕ್ಕೆ ಹತ್ತಿರವಾಗುತ್ತದೆ.

ಎರಡು ಕುಟುಂಬಗಳು. ಆ ಕುಟುಂಬಗಳ ಮಕ್ಕಳ ಬಾಲ್ಯದ ಆಟಗಳು. ಬಾಲ್ಯದಲ್ಲೇ ಹುಟ್ಟಿಕೊಳ್ಳುವ ಪ್ರೀತಿ. ದೊಡ್ಡವರಾದ ಮೇಲೂ ಜತೆಯಾಗಿ ಬಾಳುವ ಕನಸು ಹೊತ್ತವರು ಹುಡುಗಾಟಿಕೆಯಲ್ಲಿ ಮಾಡಿದ ತಪ್ಪಿನಿಂದ ಹೆತ್ತವರಿಗೆ ಹೆದರಿ ಊರು ಬಿಡುವ ಮಕ್ಕಳನ್ನು ಹುಡುಕಿ ಹುಡುಕಿ ಸುಸ್ತಾಗಿ ಸುಮ್ಮನಾದ ಪೋಷಕರು. ಬದು ಕಿದ್ದಾರೋ ಇಲ್ಲವೋ ಗೊತ್ತಿಲ್ಲದೆ ಕಾಲ ಕಳೆಯುವ ಈ ಪೋಷಕರ ಸಂಕಷ್ಟದ ದಾರಿಯಲ್ಲಿ ನಿರ್ದೇಶಕರು ಉಳಿದ ಸಂಬಂಧಗಳ ಕುರಿತು ಮಾತನಾಡುತ್ತಾರೆ. ಹೆಚ್ಚಾಗಿ ಮಕ್ಕಳಿಂದ ದೂರಾಗಿರುವ ಹೆತ್ತವರ ಯಾತನೆ, ಎಲ್ಲರೂ ಇದ್ದು ಯಾರೂ ಇಲ್ಲದಂತೆ ಬದುಕುತ್ತಿರುವ ಮಕ್ಕಳ ವೇದನೆಯನ್ನು ಹೇಳುತ್ತಾರೆ.

ಊರು ಬಿಟ್ಟಮಕ್ಕಳು ವಾಪಸ್ಸು ಬರುತ್ತಾರೆಯೇ? ಎಂಬುದು ಕತೆಯ ಮುಖ್ಯ ಕೇಂದ್ರಬಿಂದು. ಇಲ್ಲಿ ಎಲ್ಲ ಪಾತ್ರಗಳು ನಿರ್ದೇಶಕರು ಹೇಳಿದ್ದನ್ನು ಮಾತ್ರ ಮಾಡಿವೆ ಅಷ್ಟೆ. ಯೋಗೇಶ್‌ ಮಾಸ್ಟರ್‌ ಅವರನ್ನು ಹಿಂದೂ ದೇವರ ವಿರೋಧಿಯೆಂದು ಬಿಂಬಿಸಿದ ವರು ಈ ಸಿನಿಮಾ ನೋಡಿದರೆ ಅವರ ವಿರೋಧಿ ಸುವ ವರ್ಗ ಕೂಡ ಅಭಿಮಾನಿಗಳಾಗುತ್ತಾರೆ. ಅಷ್ಟರ ಮಟ್ಟಿಗೆ ಮಾಸ್ಟರ್‌, ಇಲ್ಲಿ ಆಧ್ಯಾತ್ಮಿಕವಾಗಿ ಕಾಣಿಸಿಕೊಂಡಿದ್ದಾರೆ. 

ಸಪ್ಪೆ ಎನಿಸುವ ಸ್ಕ್ರೀನ್‌ ಪ್ಲೇ, ನಿಧಾನಗತಿ ನಿರೂ ಪಣೆ, ಅತ್ಯಂತ ಸಾಧಾರಣ ಸಂಭಾಷಣೆಗಳು ಚಿತ್ರದ ಕೊರತೆ. ಆದರೆ ಪದ್ಯಗಳಂತೆ ಇಂಪಾಗಿ ಕೇಳುವ ಹಾಡುಗಳು, ಗಟ್ಟಿಕತೆಯಾಗಿ ಈ ಸಿನಿಮಾ ಇಷ್ಟವಾಗುತ್ತದೆ. ಆದರೂ ಮಾರುವವನ ಬಳಿ ಒಳ್ಳೆಯ ಪ್ರಾಡೆಕ್ಟ್ ಇದ್ದರೆ ಸಾಲದು. ಅದಕ್ಕೆ ಬಣ್ಣ ಬಣ್ಣದ ಲೇಬಲ್‌, ಇಮೇಜ್‌, ಕಲರ್‌ಫುಲ್‌ ಮಾತುಗಳನ್ನು ಜೋಡಿಸಿ ಪ್ಯಾಕ್‌ ಮಾಡಿ ಮಾರುವ ಕಲೆಯೂ ಗೊತ್ತಿರಬೇಕೆಂಬುದು ಚಿತ್ರರಂಗದ ಲೆಕ್ಕಾಚಾರ. ಇದರ ಆಚೆಗೆ ಮೂಡಿರುವ ‘ಮರಳಿ ಮನೆಗೆ' ಸಿನಿಮಾ, ಭಾವುಕ ದಾರಿಯ ಮೈಲುಗಲ್ಲಿನಂತೆ ಕಾಣುತ್ತದೆ.

-ಆರ್.ಕೇಶವ ಮೂರ್ತಿ,ಕನ್ನಡಪ್ರಭ