ರಾಜ್ಯದ ಕೌಶಲ್ಯಾಭಿವೃದ್ಧಿ ನಿಗಮ ನಿರೀಕ್ಷೆಗೂ ಮೀರಿ ಸಾಧನೆ ಮಾಡಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರವು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನೇ ಕೇಂದ್ರದ ಸೇವೆಗೆ ಕರೆಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ಬೆಂಗಳೂರು : ರಾಜ್ಯದ ಕೌಶಲ್ಯಾಭಿವೃದ್ಧಿ ನಿಗಮ ನಿರೀಕ್ಷೆಗೂ ಮೀರಿ ಸಾಧನೆ ಮಾಡಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರವು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನೇ ಕೇಂದ್ರದ ಸೇವೆಗೆ ಕರೆಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ನಿಗಮವು ಆರಂಭವಾದ ಕೇವಲ ಒಂದು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಕಾರ್ಯ ನಿರ್ವಹಿಸಿದೆ. ಇದನ್ನು ಗಮನಿಸಿದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಅವರು ನಿಗಮಕ್ಕೆ ಭೇಟಿ ನೀಡಿ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ನಿಗಮದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಸುತ್ತಿದ್ದ ಹಿರಿಯ ಅಧಿಕಾರಿಗಳಾದ ಬಿ.ಎಸ್‌. ಹಿರೇಮಠ, ಅನ್ವರ್‌ ಪಾಷಾ, ಎಸ್‌.ಎ. ಕಾತರಕಿ ಅವರನ್ನು ಕೇಂದ್ರ ಸರ್ಕಾರ ತನ್ನ ಸೇವೆಗೆ ಕರೆಸಿಕೊಂಡಿದೆ. ಕೇಂದ್ರದಲ್ಲಿಯೂ ರಾಜ್ಯದ ಮಾದರಿ ಯೋಜನೆಯನ್ನು ಅನುಷ್ಠಾನ ಮಾಡುವುದಕ್ಕಾಗಿ ಅಧಿಕಾರಿಗಳನ್ನು ಕರೆಯಿಸಿಕೊಂಡಿದೆ ಎಂದು ತಿಳಿಸಿದರು.

7.5 ಲಕ್ಷ ನೋಂದಣಿ: ನಿರುದ್ಯೋಗ ಮುಕ್ತ ಕರ್ನಾಟಕ ಮಾಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ‘ಕೌಶಲ್ಯ ಭಾಗ್ಯ’ ಯೋಜನೆಯಡಿ ಈವರೆಗೆ 7.5 ಲಕ್ಷ ನಿರುದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 1.82 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಮತ್ತು ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಮಾಡಿಕೊಂಡು ಉದ್ಯೋಗವಿಲ್ಲದೆ ಬರಿಗೈಯಲ್ಲಿದ್ದ ಯುವಕರನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.

ಪ್ರತಿಷ್ಠಿತ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಉಚಿತ ತರಬೇತಿ ಮತ್ತು ಉದ್ಯೋಗ ನೀಡಲಾಗುತ್ತಿದೆ. ರಾಜ್ಯದ ಗ್ರಾಮೀಣ ಹಾಗೂ ಕಡು ಬಡತನದಲ್ಲಿರುವ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮತ್ತು ಉದ್ಯೋಗ ಕೈಗೊಳ್ಳಲು ವಿದೇಶಿ ಕೋಶ ಎಂಬ ವಿಭಾಗ ಆರಂಭಿಸಲಾಗಿದೆ. ಇದಕ್ಕಾಗಿ ವಿವಿಧ 12 ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ ಅವರನ್ನು ವಿದೇಶಿ ಕೋಶದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಯುರೋಪ್‌, ಜರ್ಮನಿ, ಕುವೈತ್‌, ಕತಾರ್‌, ಅಬುಧಾಬಿ, ಆಸ್ಪ್ರೇಲಿಯಾ ಸೇರಿದಂತೆ ವಿವಿಧ 12 ದೇಶಗಳೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮತ್ತಷ್ಟುದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಚರ್ಚಿಸಲಾಗುತ್ತಿದೆ.

ಸರ್ಕಾರಿ ಸ್ವಾಮ್ಯದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮೂಲಕ ಚಾಲನಾ ತರಬೇತಿ, ಖಾಸಗಿ ಸಂಸ್ಥೆಗಳಿಂದ ಮಾಹಿತಿ ತಂತ್ರಜ್ಞಾನ, ಸಮಾಜ ಕಲ್ಯಾಣ, ಕರಕುಶಲ ಮತ್ತು ಜವಳಿ, ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ತರಬೇತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ.

ಶಿಬಿರಾರ್ಥಿಗಳಿಗೆ ಗೌರವಧನ: ಜಿಲ್ಲಾಮಟ್ಟದಲ್ಲಿ ಹಾಗೂ ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈ ವೇಳೆ ಶಿಬಿರಾರ್ಥಿಗಳು ವಸತಿ ಮತ್ತು ಊಟದ ವ್ಯವಸ್ಥೆ ಮಾಡಿಕೊಳ್ಳುವುದಕ್ಕಾಗಿ ಮಾಸಿಕ ಎರಡು ಸಾವಿರ ರು. ಗೌರವಧನ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ಈ ಹೊಸ ಯೋಜನೆ ಜಾರಿಗೊಳಿಸಲಾಗಿದೆ. ಗ್ರಾಮೀಣ ಭಾಗದ ಶಿಬಿರಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ನಿಗಮವು ಆರಂಭವಾದ ಒಂದೇ ವರ್ಷದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ನಿಗಮವು ಸಾಕಷ್ಟುಮಾಹಿತಿಗಳನ್ನು ಪಡೆದುಕೊಂಡಿದೆ. ಇಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಸಹ ಕೇಂದ್ರ ಸೇವೆಗೆ ನಿಯೋಜಿಸಿಕೊಂಡಿದೆ.

- ಮುರಳೀಧರ ಹಾಲಪ್ಪ, ಅಧ್ಯಕ್ಷರು, ಕೌಶಲ್ಯಾಭಿವೃದ್ಧಿ ನಿಗಮ