ಬೆಳಗಾವಿ, (ಮೇ,02): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಸಿದ್ಧ ಎಂದು ಎದೆ ಉಬ್ಬಿಸಿ ಹೇಳಿದ್ದ ರಮೇಶ್ ಜಾರಕಿಹೊಳಿ ಬಳಿಕ ಕೊಂಚ ಸೈಲೆಂಟ್ ಆಗಿದ್ದಾರೆ.

ಸಚಿವ ಸ್ಥಾನ ಕಿತ್ತಿಕೊಂಡಾಗಿನಿಂದ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿರುವ ರಮೇಶ್ ಸಾಹುಕಾರ ಇತ್ತೀಚೆಗೆ ಮುಕ್ತಾಯವಾದ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು.  ಈ ಮೂಲಕ ತಮ್ಮ ಸಹೋದರ ಸತೀಶ್ ಜಾರಕಿಹೊಳಿಗೆ  ಸೆಡ್ಡು ಹೊಡೆದಿದ್ದರು. 

 ಈಗ ಮತ್ತೊಮ್ಮೆ ರಮೇಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ. ಇಂದು [ಗುರುವಾರ] ಗೋಕಾಕ್​ನಲ್ಲಿ ನಡೆದ ಕೆಎಂಎಫ್ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ರಮೇಶ್,  ಮೇ 25ರ ನಂತರ ಸಚಿವರಾಗಿ ಓಡಾಡುತ್ತಿರುವವರೆಲ್ಲಾ ಮಾಜಿ ಆಗಲಿದ್ದಾರೆ. ಮುಂದೆ ನಮಗೆ ದೊಡ್ಡ ಪ್ರಮಾಣದಲ್ಲಿ ಅಧಿಕಾರ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ಮೇ 25ರ ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣವಾಗಲಿದೆ. ಈಗ ಸಚಿವರಾಗಿ ಓಡಾಡೋವರು ಮಾಜಿ ಆಗಲಿದ್ದಾರೆ. ಕೆಂಪ ದೀಪಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ವಿಶ್ವಾಸ ದ್ರೋಹಿ, ಬೆನ್ನಿಗೆ ಚೂರಿ ಹಾಕೋವರನ್ನು ನಂಬಬೇಡಿ ಎಂದು ಪರೋಕ್ಷವಾಗಿ ರಮೇಶ್​ ಜಾರಕಿಹೊಳಿ ಸಚಿವ ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

ರಮೇರ್ಶ ಜಾರಕಿಹೊಳಿ ಅವರ ಈ ಮಾತಗಳನ್ನು ಗಮನಿಸಿದ್ರೆ ತಮ್ಮ ಸಹೋದರ ಸತೀಶ್ ಅವರನ್ನು ಉದ್ದೇಶವಾಗಿಟ್ಟುಕೊಂಡೆ ಮಾತನಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ.