ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿರುವ ಅವರು ಸರ್ಕಾರ ಯಾವಾಗ ಉರುಳುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಚಿತ್ರದುರ್ಗ : ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಸರ್ಕಾರ ಲೋಕಸಭಾ ಚುನಾವಣೆವರೆಗೂ ಇರುತ್ತೋ, ನಾಳೆಯೇ ಬೀಳುತ್ತೋ ಕಾದು ನೋಡೋಣ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಗಾಯಿತ್ರಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ದಿ.ಆನಂತ್‌ಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಪರ್ಕದಲ್ಲಿ ಅನೇಕ ಜನ ಶಾಸಕರಿದ್ದಾರೆ. ನಾವಾಗಿ ಪಕ್ಷಕ್ಕೆ ಬನ್ನಿ ಅಂತ ಯಾರನ್ನು ಕೇಳುವುದಿಲ್ಲ, ಅಪರೇಷನ್ ನಡೆಸುವುದಿಲ್ಲ, ನಾವು ಮಾಡಿದರೆ ಅಪರೇಷನ್ ಕಮಲ ಅಂತಾರೇ, ರಾಮನಗರ ಅಭ್ಯರ್ಥಿಯನ್ನು ಸೆಳೆದಿದ್ದು ಹಾಗಾದರೆ ಏನು? ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಅನ್ನುವಂತೆ ಕಾಂಗ್ರೆಸ್‌ನವರ ಆಟ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಇಂದಿಗೂ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುತ್ತೇನೆ ಅಂತ ಎಲ್ಲೂ ಹೇಳಿಲ್ಲ. ರಮೇಶ್ ಜಾರಕಿಹೊಳಿ ಬಿಜೆಪಿಯ ಪ್ರಮುಖ ನಾಯಕರ ಜೊತೆ ಸ್ನೇಹದಿಂದಿದ್ದಾರೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ನಾನು ಎಷ್ಟುದಿನ ಮುಖ್ಯಮಂತ್ರಿ ಆಗಿರುತ್ತಿನೋ ಗೊತ್ತಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಶಾಸಕ ಸತೀಶ್ ಜಾರಕಿಹೊಳಿ ಇದೇ ರೀತಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ, ಅವರನ್ನು ಯಾರೂ ನಂಬೋತ್ತಾರೋ ಗೊತ್ತಿಲ್ಲ ಎಂದರು.
ಯಾರೇ ಬಂದರೂ ಮುಕ್ತ ಆಹ್ವಾನ:
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತ್ಯಜಿಸಿ ಬಿಜೆಪಿ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಇದರಲ್ಲಿ ತೆರೆಮರೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗಾಗಲೇ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ 6 ತಿಂಗಳಿನಿಂದ ಅಭಿವೃದ್ಧಿ ಎಂಬುದೇ ಮರೀಚಿಕೆಯಾಗಿದೆ. ಹೀಗಾಗಿ, ಬಿಜೆಪಿಗೆ ಸೇರ ಬಯಸುವವರು ಪಕ್ಷಕ್ಕೆ ಬರಬಹುದು. ಇದಕ್ಕೆ ಮುಕ್ತ ಆಹ್ವಾನವಿದೆ ಎಂದರು.
