ಬೆಂಗಳೂರು [ಜೂ.15] :  ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರು ಬಿಜೆಪಿಯ ಹಸಿರು ನಿಶಾನೆಗಾಗಿ ಕಾಯುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಶುಕ್ರವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಇಬ್ಬರು ಪಕ್ಷೇತರ ಶಾಸಕರಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳಲ್ಲೂ ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಬಿಜೆಪಿ ನಾಯಕರು ಕೈಗೊಳ್ಳುವ ಮುಂದಿನ ನಿರ್ಧಾರಕ್ಕಾಗಿ ಕಾದು ನೋಡುತ್ತಿದ್ದಾರೆ ಎನ್ನಲಾಗಿದೆ.

ಉಭಯ ಪಕ್ಷಗಳಲ್ಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗಿಯೇ ಇದೆ. ಸಂಪುಟ ವಿಸ್ತರಣೆ ಬದಲು ಸಂಪುಟ ಪುನಾರಚನೆ ಕೈಗೆತ್ತಿಕೊಳ್ಳುವ ಮೂಲಕ ಆ ಎಲ್ಲ ಅತೃಪ್ತ ಶಾಸಕರಿಗೂ ಅವಕಾಶ ನೀಡಬೇಕು ಎಂಬ ಪ್ರಸ್ತಾಪ ಆರಂಭದಲ್ಲಿ ಇದ್ದರೂ ನಂತರ ಅದನ್ನು ಕೈಬಿಡಲಾಗಿತ್ತು. ಇದರಿಂದ ಅತೃಪ್ತ ಶಾಸಕರಿಗೆ ನಿರಾಸೆ ಉಂಟಾದರೂ ಅದರ ಆಕ್ರೋಶವನ್ನು ಹೊರಹಾಕದೆ ಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಪರ್ಯಾಯ ಸರ್ಕಾರ ರಚನೆ ಸಂಬಂಧ ಬಿಜೆಪಿ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ, ಯಾವಾಗ ಹಸಿರು ನಿಶಾನೆ ನೀಡುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ. ಅಲ್ಲಿಂದ ಮುಂದಿನ ಪ್ರಕ್ರಿಯೆ ಆರಂಭವಾದ ಕೂಡಲೇ ಬಿಜೆಪಿಗೆ ವಲಸೆ ಹೋಗಲು ಸಜ್ಜಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕಾಂಗ್ರೆಸ್ಸಿನ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಅವರು ಬಹಿರಂಗವಾಗಿಯೇ ಬಿಜೆಪಿ ಹೋಗುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರೊಂದಿಗೆ ಕೆಲವು ಶಾಸಕರು ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಇತರ ಹಲವು ಶಾಸಕರು ಮುನಿಸಿಕೊಂಡಿದ್ದಾರೆ.