Asianet Suvarna News Asianet Suvarna News

ಬಿಜೆಪಿಯಲ್ಲಿ ಈಗ ರಾಜೀನಾಮೆ ಪರ್ವ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಆಕಾಂಕ್ಷಿಗಳ ವಿರೋಧ ತೀವ್ರಗೊಂಡಿದೆ. ಇದರ ಮುಂದುವರೆದ ಭಾಗವಾಗಿ ಹಲವೆಡೆ ರಾಜೀನಾಮೆ, ಪಕ್ಷಾಂತರ ಪರ್ವವೂ ಶುರುವಾಗಿದ್ದು, ಇನ್ನೂ ಕೆಲವೆಡೆ ಈಗಿನ ಅಭ್ಯರ್ಥಿಯ ಟಿಕೆಟ್‌ ರದ್ದುಪಡಿಸಿ ಮೂಲ ಬಿಜೆಪಿಗರಿಗೆ ಟಿಕೆಟ್‌ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.

Many BJP Leaders Resignation

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಆಕಾಂಕ್ಷಿಗಳ ವಿರೋಧ ತೀವ್ರಗೊಂಡಿದೆ. ಇದರ ಮುಂದುವರೆದ ಭಾಗವಾಗಿ ಹಲವೆಡೆ ರಾಜೀನಾಮೆ, ಪಕ್ಷಾಂತರ ಪರ್ವವೂ ಶುರುವಾಗಿದ್ದು, ಇನ್ನೂ ಕೆಲವೆಡೆ ಈಗಿನ ಅಭ್ಯರ್ಥಿಯ ಟಿಕೆಟ್‌ ರದ್ದುಪಡಿಸಿ ಮೂಲ ಬಿಜೆಪಿಗರಿಗೆ ಟಿಕೆಟ್‌ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.

ಕುಂದಾಪುರದಲ್ಲಿ ಬಿಜೆಪಿ ಆಕಾಂಕ್ಷಿ ಕಿಶೋರ್‌ ಸೇರಿ 6 ಮಂದಿ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ರಸ್ತೆ ನಡೆಸಿ ಪ್ರತಿಭಟನೆ ನಡೆಸಿದ್ದರೆ, ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್‌ ಪಟ್ಟಣಶೆಟ್ಟಿಬೆಂಬಲಿಗರು ನಗರಸಭೆ ಸದಸ್ಯತ್ವಕ್ಕೆ ವಿದಾಯ ಹೇಳಲು ಮುಂದಾಗಿದ್ದಾರೆ. ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಕಾಂಗ್ರೆಸ್‌ ಶಾಸಕ ರಫೀಕ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಜೀನಾಮೆ ಪರ್ವ:

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ್‌ ಶೆಟ್ಟಿಗೆ ಟಿಕೆಟ್‌ ನೀಡಿದ್ದನ್ನು ವಿರೋಧಿಸಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕಿಶೋರ್‌ ಕುಮಾರ್‌ ಮತ್ತವರ 6 ಮಂದಿ ಸಂಗಡಿಗರು ಜಿಲ್ಲಾ ಮಟ್ಟದ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಪಕ್ಷದಲ್ಲೇ ಮುಂದುವರೆದು ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. ಆದರೆ,ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ್‌ ಹೆಗ್ಡೆ ತಿಳಿಸಿದ್ದಾರೆ. ಈ ನಡುವೆ ಕ್ಷೇತ್ರದ ವಿವಿಧ ಮೋರ್ಚಾಗಳ 150 ಪದಾಧಿಕಾರಿಗಳು ರಾಜೀನಾಮೆಗೆ ಚಿಂತನೆ ನಡೆಸಿದ್ದಾರೆ.

ಬೆಂಬಲಿಗರ ಆಕ್ರೋಶ:

ವಿಜಯಪುರದಲ್ಲಿ ವಿಧಾನಪರಿಷತ್‌ ಸದಸ್ಯ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಟಿಕೆಟ್‌ ನೀಡಿದ್ದನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಅವರ ಬೆಂಬಲಿಗರಾದ ಮಹಾನಗರ ಪಾಲಿಕೆ ಸದಸ್ಯ ಗೋಪಾಲ ಘಟಕಾಂಬಳೆ ಮತ್ತಿತರರು, ಯತ್ನಾಳ್‌ ಅವರ ಟಿಕೆಟ್‌ ಅನ್ನು ರದ್ದುಪಡಿಸಲು ಆಗ್ರಹಿಸಿದ್ದು ಇನ್ನೆರಡು ದಿನದಲ್ಲಿ ರಾಜಿನಾಮೆ ನಿರ್ಧಾರಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಹಾಗೂ ಮೊಳಕಾಲ್ಮುರುಗಳಲ್ಲಿ ಶಾಸಕ ಎಸ್‌.ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅವರು ಬೆಂಬಲಿಗರು ರಸ್ತೆ ತಡೆ ನಡೆಸಿ, ಟೈರ್‌ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ನೀಡಿದ್ದರೆ ಕ್ಷೇತ್ರದ ಹಲವೆಡೆ ಗಂಭೀರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ನಡುವೆ ಸೋಮವಾರ ಜೆಡಿಎಸ್‌ ನಾಯಕರ ಜತೆ ಸಮಾಲೋಚನೆ ನಡೆಸಿದ್ದ ತುಮಕೂರು ಬಿಜೆಪಿ ಮಾಜಿ ಶಾಸಕ ಸೊಗಡು ಶಿವಣ್ಣ ಕಾಂಗ್ರೆಸ್‌ ಶಾಸಕ ರಫೀಕ್‌ ಅಹಮದ್‌ ಜತೆ ಸಮಾಲೋಚನೆ ನಡೆಸಿರುವುದು ಸಂಚಲನಕ್ಕೆ ಕಾರಣವಾಗಿದೆ.

ಮಾಜಿ ಸಚಿವ ಸೊಗಡು ಶಿವಣ್ಣ ಅವರು ಮಂಗಳವಾರ ತುಮಕೂರು ಕಾಂಗ್ರೆಸ್‌ ಶಾಸಕ ರಫಿಕ್‌ ಅಹಮದ್‌ ಅವರನ್ನು ನಗರದ ಚಿಕ್ಕಪೇಟೆಯಲ್ಲಿರುವ ಅವರ ಮನೆಯಲ್ಲಿ ಭೇಟಿಯಾಗಿ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದು ಸಹ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ. ತುಮಕೂರಿನಲ್ಲಿ ರಫಿಕ್‌ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅಲ್ಲೇ ಅವರನ್ನು ಭೇಟಿಯಾದ ಸೊಗಡು, ನಂತರ ಮನೆಗೂ ತೆರಳಿ ಮಾತುಕತೆ ನಡೆಸಿದ್ದಾರೆ. ನಿನ್ನೆಯಷ್ಟೇ ಶಿವಣ್ಣ ಅವರು ಜೆಡಿಎಸ್‌ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು ಸಂಚಲನಕ್ಕೆ ಕಾರಣವಾಗಿತ್ತು.

Follow Us:
Download App:
  • android
  • ios