ಮೊದಲ ಬಾರಿಗೆ ಗೋವಾ ಮುಖ್ಯಮಂತ್ರಿ  ಮನೋಹರ್ ಪರಿಕರ್ ಮೊದಲ ಬಾರಿಗೆ ತಮ್ಮ ಕಾಯಿಲೆ ಬಗ್ಗೆ ಮನಬಿಚ್ಚ ಮಾತನಾಡಿದ್ದಾರೆ. ಈ ಬಗ್ಗೆ ಅನೇಕ ವಿಚಾರಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

ನವದೆಹಲಿ: ತಮಗೆ ಗಂಭೀರ ಸ್ವರೂಪದ ಕಾಯಿಲೆ ಇರುವ ಬಗ್ಗೆ ವೈದ್ಯರು ಮಾಹಿತಿ ನೀಡಿದಾಗ ನಾನು ಹೆದರಲಿಲ್ಲ. ಬದಲಾಗಿ ಇಚ್ಛಾಶಕ್ತಿಯಿಂದಾಗಿ ಆ ಕಾಯಿಲೆಯಿಂದ ಚೇತರಿಸಿಕೊಂಡೆ ಎಂದು ಗೋವಾ ಸಿಎಂ ಮನೋಹರ್‌ ಪರಿಕರ್‌ ಹೇಳಿದ್ದಾರೆ.

ಬುಧವಾರ ಗೋವಾ ಪತ್ರಿಕೆಗಳ ಸಂಪಾದಕರೊಂದಿಗೆ ನಡೆಸಿದ ಸಂವಾದದ ವೇಳೆ, ಸಂಪಾದಕರೊಬ್ಬರು ಕಾಯಿಲೆ ಬಗ್ಗೆ ಕೇಳಿದಾಗ, ಕೆಲ ಕಾಲ ಮೌನಕ್ಕೆ ಶರಣಾದ ಸಿಎಂ, ವೈದ್ಯರು ಇಂಥದ್ದೊಂದು ಕಾಯಿಲೆ ಬಗ್ಗೆ ನನಗೆ ಹೇಳಿದಾಗ ನಾನು ಹೆದರಲಿಲ್ಲ. 

ನನ್ನಲ್ಲಿನ ಇಚ್ಛಾಶಕ್ತಿಯ ಮೂಲಕ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದೇನೆ. ಆದರೆ ನಾನಿನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬಜೆಟ್‌ ಅಧಿವೇಶನದ ಬಳಿಕ ಮತ್ತೆ ಒಂದು ವಾರ ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಲಿದ್ದೇನೆ ಎಂದು ಹೇಳಿದ್ದಾರೆ. 

3 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದ ಪರಿಕರ್‌, ಮುಂಬೈನಲ್ಲಿ ತಪಾಸಣೆಗೆ ಒಳಗಾಗಿದ್ದರು. ಬಳಿಕ ಮಾರ್ಚ್ ಮೊದಲ ವಾರದಲ್ಲಿ ದಿಢೀರನೆ ಅಮೆರಿಕಕ್ಕೆ ಚಿಕಿತ್ಸೆಗಾಗಿ ತೆರಳುವುದಾಗಿ ಘೋಷಿಸಿದ್ದರು. 

ಚಿಕಿತ್ಸೆ ಪೂರ್ಣಗೊಂಡು ಇತ್ತೀಚೆಗಷ್ಟೇ ಸ್ವದೇಶಕ್ಕೆ ಮರಳಿದ್ದರು. ಈ ಅವಧಿಯಲ್ಲಿ ಅವರ ಅನಾರೋಗ್ಯದ ಬಗ್ಗೆ ನಾನಾ ಸುದ್ದಿಗಳು ಹಬ್ಬಿದ್ದವಾದರೂ, ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿರಲಿಲ್ಲ. ಆದರೆ ಮೂಲಗಳ ಪ್ರಕಾರ ಪರಿಕರ್‌ ಮೇದೋಜೀರಕಾಂಗ ಗ್ರಂಥಿ ಸಂಬಂಧಿ ಕ್ಯಾನ್ಸರ್‌ಗೆ ತುತ್ತಾಗಿದ್ದರು ಎನ್ನಲಾಗಿದೆ.