ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚುನಾವಣೆ ಮುಗಿವವರೆಗೂ ತಾವು ಮಾತುಕತೆ ನಡೆಸುವ ಇರಾದೆ ಹೊಂದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಹೇಳಿದ್ದಾರೆ.
ಪಣಜಿ (ಡಿ.30): ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚುನಾವಣೆ ಮುಗಿವವರೆಗೂ ತಾವು ಮಾತುಕತೆ ನಡೆಸುವ ಇರಾದೆ ಹೊಂದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಹೇಳಿದ್ದಾರೆ. ಈ ಮೂಲಕ ಮಹದಾಯಿ ವಿಷಯದಲ್ಲಿ ಉಭಯ ರಾಜ್ಯಗಳ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಕ್ಷೀಣ ವಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಇನ್ನು ಕೆಲವು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿದೆ.
ಇನ್ನು 1-2 ತಿಂಗಳಲ್ಲಿ ಆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದೆ. ಹೀಗಾಗಿ ಮಾತುಕತೆ ಇಲ್ಲ’ ಎಂದು ಉತ್ತರಿಸಿದರು. ‘ಅಷ್ಟೊತ್ತಿಗೇ ಮಹದಾಯಿ ನ್ಯಾಯಾಧಿಕರಣದ ವಿಚಾರಣೆ ಕೂಡ ಆರಂಭವಾಗುತ್ತಿದ್ದು, ತೀರ್ಪು ಬರುವ ವಿಶ್ವಾಸವೂ ಇದೆ’ ಎಂದು ಹೇಳುವ ಮೂಲಕ ಮಾತುಕತೆ ಸಾಧ್ಯತೆಯನ್ನು ತಳ್ಳಿಹಾಕಿದರು.
ಮಹದಾಯಿ ನ್ಯಾಯಾಧಿಕರಣದ ಅವಧಿ 2018ರ ಆಗಸ್ಟ್‌ಗೆ ಮುಗಿಯುತ್ತದೆ. ಇನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ಕೋರಿ ಬರೆದ ಪತ್ರದ ಬಗ್ಗೆಯೂ ಉತ್ತರಿಸಿದ ಗೋವಾ ಮುಖ್ಯಮಂತ್ರಿ, ‘ಈವರೆಗೂ ಕರ್ನಾಟಕ ಮುಖ್ಯ ಮಂತ್ರಿ ಪತ್ರ ಕೈಸೇರಿಲ್ಲ’ ಎಂದಷ್ಟೇ ಉತ್ತರಿಸಿದರು.
