ಪಣಜಿ[ಮಾ.04]: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರು ಕ್ಯಾನ್ಸರ್‌ನ ಅಂತಿಮ ಹಂತದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೋವಾ ಸರ್ಕಾರದ ಹಿರಿಯ ಸಚಿವ ವಿಜಯ ಸರದೇಸಾಯಿ ಹೇಳಿದ್ದಾರೆ.

ಗೋವಾ ಫಾರ್ವರ್ಡ್‌ ಪಕ್ಷದ ನೇತೃತ್ವ ವಹಿಸಿರುವ ಸರದೇಸಾಯಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪರ್ರಿಕರ್‌ ಅವರು ಅಂತಿಮ ಹಂತದ ಕ್ಯಾನ್ಸರ್‌ನಲ್ಲಿದ್ದಾರೆ. ಅನಾರೋಗ್ಯದ ಮಧ್ಯೆಯೂ ಅವರು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ಹಾಗೂ ಹಣಕಾಸು ಅನುದಾನಕ್ಕೆ ಸೋಮವಾರ ನಾನು ಭೇಟಿ ಮಾಡಲಿದ್ದೇನೆ’ ಎಂದರು.

ಪರ್ರಿಕರ್‌ ಅವರಿಗೆ ಕ್ಯಾನ್ಸರ್‌ ಇರುವ ಬಗ್ಗೆ ಗೋವಾ ಸಿಎಂ ಕಚೇರಿಯಿಂದ ಯಾವುದೇ ಮಾಹಿತಿ ಇಲ್ಲ. ಆದರೆ ‘ಭಾನುವಾರ ಪರ್ರಿಕರ್‌ ಅವರು ಗೋವಾ ಮೆಡಿಕಲ್‌ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾದರು. ಬಳಿಕ ಅವರಿಗೆ ಮನೆಗೆ ತೆರಳಲು ಅವಕಾಶ ನೀಡಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಸಿಎಂ ಕಚೇರಿ ಹೇಳಿದೆ.

ಇದಕ್ಕೂ ಮುನ್ನ ಪರ್ರಿಕರ್‌ ಮುಂಬೈ, ದೆಹಲಿ, ಅಮೆರಿಕಗಳಲ್ಲಿ ಚಿಕಿತ್ಸೆ ಪಡೆದಿದ್ದರು.