ಚಂಡೀಗಢ [ಅ.27]:  ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದ ಕಾರಣ ಅತಂತ್ರ ಸ್ಥಿತಿ ಎದುರಿಸುತ್ತಿದ್ದ ಹರ್ಯಾಣದಲ್ಲಿನ ಸರ್ಕಾರ ರಚನೆ ಹಗ್ಗಜಗ್ಗಾಟ ಅಂತ್ಯಗೊಂಡಿದ್ದು, ನರಕ ಚತುರ್ದಶಿ ದಿನವಾದ ಇಂದು 2ನೇ ಬಾರಿ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ಮನೋಹರಲಾಲ್‌ ಖಟ್ಟರ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಗೆ ಬೆಂಬಲ ನೀಡಿರುವ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮುಖಂಡ ದುಷ್ಯಂತ್‌ ಚೌಟಾಲಾ ಅವರು ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಬಿಜೆಪಿಯ 40 ಸದಸ್ಯರ ಬೆಂಬಲ ಹೊಂದಿರುವ ಖಟ್ಟರ್‌ ಅವರು ತಮಗೆ ಜೆಜೆಪಿಯ 10 ಶಾಸಕರು ಹಾಗೂ 7 ಪಕ್ಷೇತರರು ಸೇರಿ 57 ಶಾಸಕರ ಬೆಂಬಲವಿದೆ ಎಂದು ರಾಜ್ಯಪಾಲ ಸತ್ಯದೇವ್‌ ನಾರಾಯಣ ಆರ್ಯ ಅವರನ್ನು ಭೇಟಿ ಮಾಡಿ ಪತ್ರ ಸಲ್ಲಿಸಿದರು ಹಾಗೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಚೌಟಾಲಾ ಮತ್ತು ಪಕ್ಷೇತರ ಶಾಸಕರು ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಖಟ್ಟರ್‌ ನಾಯಕತ್ವದ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂಬ ಪತ್ರ ನೀಡಿದರು.

ಬಳಿಕ ಆರ್ಯ ಅವರು ಖಟ್ಟರ್‌ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಸುದ್ದಿಗಾರರ ಜತೆ ಮಾತನಾಡಿ ಈ ಬಗ್ಗೆ ವಿವರ ನೀಡಿದ ಖಟ್ಟರ್‌, ‘ದೀಪಾವಳಿ ದಿನವಾದ ಭಾನುವಾರ ಮಧ್ಯಾಹ್ನ 2.15ಕ್ಕೆ ನಾನು ಪ್ರಮಾಣವಚನ ಸ್ವೀಕರಿಸಲಿದ್ದೇನೆ. ದುಷ್ಯಂತ್‌ ಚೌಟಾಲಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಕಳೆದ ಅವಧಿಯ ತಮ್ಮ ಮುಖ್ಯಮಂತ್ರಿಗಿರಿಗೆ ಖಟ್ಟರ್‌ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಬಳಿಕ ನಡೆದ ಔಪಚಾರಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಬಿಜೆಪಿ ಶಾಸಕಾಂಗ ನಾಯಕ ಎಂದು ಶಾಸಕರು ಚುನಾಯಿಸಿದರು.

ಶಾಸಕಾಂಗ ಸಭೆಗೆ ಬಿಜೆಪಿ ವೀಕ್ಷಕರಾಗಿ ದಿಲ್ಲಿಯಿಂದ ಆಗಮಿಸಿದ್ದ ಕೇಂದ್ರ ಮಂತ್ರಿ ರವಿಶಂಕರ ಪ್ರಸಾದ್‌ ಹಾಗೂ ಬಿಜೆಪಿ ರಾಜ್ಯ ಪ್ರಭಾರಿ ಅನಿಲ್‌ ಜೈನ್‌ ಅವರು, ‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ವಚ್ಛ ಹಾಗೂ ಸ್ಥಿರ ಆಡಳಿತ ನೀಡಲಿದೆ’ ಎಂದು ಭರವಸೆ ನೀಡಿದರು.

ಆದರೆ ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ಪಕ್ಷೇತರ ಶಾಸಕ ಗೋಪಾಲ್‌ ಕಾಂಡಾ ಅವರ ಬೆಂಬಲ ಪಡೆಯಲು ಬಿಜೆಪಿ ನಿರಾಕರಿಸಿದೆ ಎಂದು ಪ್ರಸಾದ್‌ ಸ್ಪಷ್ಟಪಡಿಸಿದರು.

ಶುಕ್ರವಾರ ರಾತ್ರಿ ಜೆಜೆಪಿ ಹಾಗೂ ಬಿಜೆಪಿ ಮಧ್ಯೆ ಮೈತ್ರಿ ಏರ್ಪಟ್ಟಿತ್ತು.. ದಿಲ್ಲಿಯಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಖಟ್ಟರ್‌ ಹಾಗೂ ಚೌಟಾಲಾ ಸಮ್ಮುಖದಲ್ಲಿ ಮೈತ್ರಿ ಘೋಷಣೆ ಮಾಡಿದ್ದರು.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್‌ 31, ಜೆಜೆಪಿ 10, ಐಎನ್‌ಎಲ್‌ಡಿ 1 ಹಾಗೂ ಪಕ್ಷೇತರರು 8 ಸ್ಥಾನ ಪಡೆದಿದ್ದರು. ರಾಜ್ಯ ವಿಧಾನಸಭೆಯ ಬಲ 90 ಆಗಿದ್ದು, ಬಹುಮತಕ್ಕೆ 46 ಸ್ಥಾನ ಬೇಕು. ಬಿಜೆಪಿ ಬಹುಮತ ಗಳಿಸಲು 6 ಶಾಸಕರ ಕೊರತೆ ಎದುರಿಸುತ್ತಿತ್ತು.