ಪರಪ್ಪನ ಅಗ್ರಹಾರ ಸೇರಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಸಹೋದರ ದಿವಾಕರನ್ ಮನ್ನಾರ್ ಗುಡಿ ಕಿಂಗ್ ಮೇಕರ್. ದಿವಾಕರನ್ ರಾಜಕೀಯದಲ್ಲಿ ಗುರುತಿಸಿಕೊಳ್ಳದೇ ಇದ್ದರೂ ಬಹಳ ಪ್ರಭಾವಿ ವ್ಯಕ್ತಿ. ಅನೇಕ ರಾಜಕಾರಣಿಗಳಿಗೆ ಆಪ್ತರಾಗಿದ್ದಾರೆ.

ಚೆನ್ನೈ (ನ.17): ಪರಪ್ಪನ ಅಗ್ರಹಾರ ಸೇರಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಸಹೋದರ ದಿವಾಕರನ್ ಮನ್ನಾರ್ ಗುಡಿ ಕಿಂಗ್ ಮೇಕರ್. ದಿವಾಕರನ್ ರಾಜಕೀಯದಲ್ಲಿ ಗುರುತಿಸಿಕೊಳ್ಳದೇ ಇದ್ದರೂ ಬಹಳ ಪ್ರಭಾವಿ ವ್ಯಕ್ತಿ. ಅನೇಕ ರಾಜಕಾರಣಿಗಳಿಗೆ ಆಪ್ತರಾಗಿದ್ದಾರೆ.

ತಮಿಳುನಾಡು ರಾಜಕಾರಣದಲ್ಲಿ ಪರೋಕ್ಷವಾಗಿ ಹಿಡಿತವನ್ನು ಹೊಂದಿದ್ದಾರೆ. ಸುಮಾರು 17 ಮಂದಿ ಶಾಸಕರ ಮೇಲೆ ಇವರ ಪ್ರಭಾವವಿದೆ. ಶಶಿಕಲಾ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪಗಳು ಕೇಳಿ ಬಂದಿದ್ದು, ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಶಿಕಲಾ ಹಾಗೂ ಆಪ್ತರಿಗೆ ಸಂಬಂಧಿಸಿದ 187 ಆಸ್ತಿಗಳು, ಕಂಪನಿಗಳ ಮೇಲೆ ನಾಲ್ಕು ದಿನಗಳ ಕಾಲ ದಾಳಿ ನಡೆಸಿತ್ತು. ಸತತ ನಾಲ್ಕು ದಿನಗಳ ಕಾಲ ವಿಚಾರಣೆ, ಪರಿಶೀಲನೆ ನಡೆಸಿತು. ಆದರೂ ದಿವಾಕರನ್ ಅದಕ್ಕೆ ಕ್ಯಾರೆ ಎನ್ನಲಿಲ್ಲ. ಸ್ವಲ್ವವೂ ಅಳುಕು ಕಾಣಿಸದೇ ಇದ್ದದ್ದು ಆಶ್ಚರ್ಯಕರ ಸಂಗತಿ.

ಇತ್ತೀಚಿಗೆ ಅನೇಕ ಪ್ರಭಾವಿ ರಾಜಕಾರಣಿಗಳ ಮೇಲೆ ಐಟಿ ದಾಳಿ ನಡೆದಿದೆ. ಅವರ ಪಕ್ಷದಲ್ಲಿ ಸಂಚಲನ ಉಂಟಾಗಿದೆ. ವರ್ಚಸ್ಸು ಹಾಳಾಗಿದೆ. ಕಾನೂನು, ನ್ಯಾಯಾಂಗಕ್ಕೆ ಯಾರೂ ಹೊರತಲ್ಲ ಎಂಬುದು ಅವರಿಗೂ ಮನವರಿಕೆಯಾಗಿದೆ. ಆಶ್ಚರ್ಯದ ವಿಚಾರ ಎಂದರೆ ದಿವಾಕರನ್ ಆಸ್ತಿ, ಕಂಪನಿಗಳ ಮೇಲೆ ಐಟಿ ದಾಳಿ ನಡೆಯುತ್ತಿದ್ದ ಮೂರನೇ ದಿನ ಏನೂ ಆಗಿಲ್ಲವೆಂಬಂತೆ ಅವರ ಮಗಳ ವಿವಿ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದಾರೆ. ದಿವಾಕರನ್ ಮಗಳು ಡಾ.ರಾಜಾ ಮಾದಂಗಿ ಚೆನ್ನೈನ ಶ್ರೀರಾಮ ಮೆಡಿಕಲ್ ಕಾಲೇಜಿನಲ್ಲಿ ಆರ್ಥೊದಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಮಗಳ ಘಟಿಕೋತ್ಸವದಲ್ಲಿ ಸಂಸಾರ ಸಮೇತ ಭಾಗಿಯಾಗಿ, ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರಲ್ಲಿ ಐಟಿ ದಾಳಿಯ ಬಗ್ಗೆ ಕಿಂಚಿತ್ತೂ ಅಳುಕು ಇರುವಂತೆ ಕಾಣುತ್ತಿರಲಿಲ್ಲ. ಅತ್ತ ಐಟಿ ಅಧಿಕಾರಿಗಳು ಆಸ್ತಿ, ಗಳಿಕೆಗಳ ಬಗ್ಗೆ ವಿಚಾರಣೆ, ಲೆಕ್ಕಾಚಾರ ಹಾಕುತ್ತಿದ್ದರೆ ಇತ್ತ ದಿವಾಕರನ್ ಖುಷಿಖುಷಿಯಾಗಿ ಮಗಳ ಘಟಿಕೋತ್ಸವದಲ್ಲಿ ಭಾಗವಹಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.