ದೂರದ ಮಣಿಪುರದಿಂದ ಉಡುಪಿಗೆ ಬಂದು, ಕನ್ನಡ ಕಲಿತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.83.04 ಅಂಕ ಗಳಿಸುವ ಮೂಲಕ ಬಾಲಕನೊಬ್ಬ ಗಮನಸೆಳೆದಿದ್ದಾನೆ. ರಾಜ್ಯಕ್ಕೆ ಬಂದಾಗ ಕನ್ನಡದಲ್ಲಿ ವ್ಯವಹರಿಸಲು ಪರದಾಡುತ್ತಿದ್ದ ಈ ಬಾಲಕ ಕನ್ನಡ ಪರೀಕ್ಷೆಯಲ್ಲೇ 108 ಅಂಕ ಗಳಿಸಿದ್ದಾನೆ! 

ಉಡುಪಿ (ಜೂ. 03): ದೂರದ ಮಣಿಪುರದಿಂದ ಉಡುಪಿಗೆ ಬಂದು, ಕನ್ನಡ ಕಲಿತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.83.04 ಅಂಕ ಗಳಿಸುವ ಮೂಲಕ ಬಾಲಕನೊಬ್ಬ ಗಮನಸೆಳೆದಿದ್ದಾನೆ. ರಾಜ್ಯಕ್ಕೆ ಬಂದಾಗ ಕನ್ನಡದಲ್ಲಿ ವ್ಯವಹರಿಸಲು ಪರದಾಡುತ್ತಿದ್ದ ಈ ಬಾಲಕ ಕನ್ನಡ ಪರೀಕ್ಷೆಯಲ್ಲೇ 108 ಅಂಕ ಗಳಿಸಿದ್ದಾನೆ!

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ರಾಜ್ಯದಲ್ಲೇ ಅಗ್ರ ಫಲಿತಾಂಶ ಪಡೆಯುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದುವುದು ಅಚ್ಚರಿ ವಿಷಯವೇನಲ್ಲ. ಆದರೆ ಮಣಿಪುರ ವಿದ್ಯಾರ್ಥಿಯ ಸಾಧನೆ ಕಡಿಮೆ ಇಲ್ಲ.

ಶಿಕ್ಷಣ ವಂಚಿತನಾಗಿದ್ದ:

ಮಣಿಪುರ ರಾಜ್ಯದ ಹೈರೋಕ್‌ ಎಂಬ ಪುಟ್ಟಹಳ್ಳಿಯಲ್ಲಿ ಬಡ ಕೃಷಿ ಕೂಲಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಕುಂದ್ರಕ್ಪಮ್‌ ಬಿದ್ಯಾಸುನ್‌ ಸಿಂಗ್‌ ಈ ಸಾಧನೆ ಮಾಡಿದ ಬಾಲಕ. ಹತ್ತಾರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ವು ಈಶಾನ್ಯ ರಾಜ್ಯಗಳಲ್ಲಿ ನಾನಾ ಕಾರಣಗಳಿಂದ ಶಿಕ್ಷಣ ವಂಚಿತರಾದ ಸಾವಿರಾರು ವಿದ್ಯಾರ್ಥಿಗಳನ್ನು ಕರ್ನಾಟಕ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೆ ಕರೆ ತಂದು ಅವರಿಗೆ ಸೂಕ್ತ ಶಿಕ್ಷಣದ ವ್ಯವಸ್ಥೆ ಮಾಡಿಕೊಡುತ್ತಿದೆ.

ಇದೇ ರೀತಿ ಆರ್‌ಎಸ್‌ಎಸ್‌ ಮೂಲಕ 5ನೇ ವಯಸ್ಸಿನಲ್ಲಿದ್ದಾಗ ಕರ್ನಾಟಕಕ್ಕೆ ಬಂದ ಬಿದ್ಯಾಸುನ್‌, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಗೆ ಸೇರಿದ. ಸಂಘದ ಸ್ಥಳೀಯ ಕಾರ್ಯಕರ್ತ ಗುರುರಾಜ್‌ ಗಂಟಿಹೊಳಿ ಅವರ ಮನೆಯಲ್ಲಿ ತನ್ನಂತೆಯೇ ಬಂದಿದ್ದ 17 ಮಂದಿ ಮಣಿಪುರಿ ವಿದ್ಯಾರ್ಥಿಗಳೊಂದಿಗೆ ಆಶ್ರಯ ಪಡೆದು ಶಿಕ್ಷಣ ಮುಂದುವರೆಸಿದ್ದಾನೆ.

ವ್ಯಾಸಂಗದಲ್ಲಿ ಆಸಕ್ತಿ ಹೊಂದಿದ್ದ ಬಿದ್ಯಾಸುನ್‌, ಆರಂಭದಲ್ಲಿ ಕನ್ನಡ ಭಾಷೆ ಬಾರದೇ ಸಾಕಷ್ಟುಕಷ್ಟಪಟ್ಟ. ಆದರೆ, ಬಹುಬೇಗ ಕನ್ನಡ ಕಲಿತ. ಹಿಂದಿ ಮಾತನಾಡುತ್ತಿದ್ದ ಈತ ಇತರ ಮಣಿಪುರಿ ವಿದ್ಯಾರ್ಥಿಗಳಿಗೂ ಹಿಂದಿ ಕಲಿಸಿಕೊಟ್ಟ. ಇದನ್ನು ಗಮನಿಸಿದ ಆತನ ಶಾಲೆಯ ಶಿಕ್ಷಕರು, ಮಣಿಪುರಿ ವಿದ್ಯಾರ್ಥಿಗಳೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಬಿದ್ಯಾಸುನ್‌ಗೆ ಸೂಚಿಸಿದರು. ಇದರಿಂದಾಗಿ ಇತರ ಮಣಿಪುರಿ ವಿದ್ಯಾರ್ಥಿಗಳೂ ಕನ್ನಡ ಕಲಿಯಲು ಸುಲಭವಾಯಿತು.

ಕನ್ನಡ ಭಾಷೆಯನ್ನಷ್ಟೇ ಅಲ್ಲ. ಇಲ್ಲಿನ ಆಹಾರ, ಬಟ್ಟೆ, ಜೀವನ ಪದ್ಧತಿ, ಹವಾಮಾನ, ಸಂಸ್ಕೃತಿಗಳಿಗೆ ಈತ ಹೊಂದಿಸಿಕೊಂಡ. ಹೆತ್ತವರನ್ನು ಬಿಟ್ಟು ದೂರವಿರುವ ನೋವಿನ ನಡುವೆಯೂ, ಬಿದ್ಯಾಸುನ್‌ ಊರಿನ ನಾಟಕ, ಯಕ್ಷಗಾನ, ಹಬ್ಬ, ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ಒಮ್ಮೆ ಅಯ್ಯಪ್ಪ ವ್ರತಧಾರಿಯಾಗಿ, ಶಬರಿಮಲೆಗೂ ಹೋಗಿ ಬಂದ. 10 ವರ್ಷ ಕರ್ನಾಟಕದಲ್ಲೇ ಕಳೆದ ಬಿದ್ಯಾಸುನ್‌, ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.83.04 ಅಂಕ ಗಳಿಸಿ ಸಾಧನೆ ಮಾಡಿದ್ದಾನೆ.

ಈತನ ಶಾಲೆಯಲ್ಲಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಲ್ಲಿ 9 ಮಂದಿ ಹುಡುಗಿಯರೇ ಇದ್ದರೆ, ಬಿದ್ಯಾಸುನ್‌ ಹೆಚ್ಚು ಅಂಕ ಗಳಿಸಿದ ಏಕೈಕ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾನೆ. ಇನ್ನೂ ಅಚ್ಚರಿ ಎಂದರೆ, ರಾಜ್ಯದ ಆಡಳಿತ ಭಾಷೆ ಕನ್ನಡದಲ್ಲೇ 108 ಅಂಕ ಗಳಿಸಿದ್ದಾನೆ. ಹಿಂದಿಯಲ್ಲಿ 100ಕ್ಕೆ 100, ಇಂಗ್ಲಿಷ್‌ನಲ್ಲಿ 96, ಗಣಿತದಲ್ಲಿ 77, ಸಾಮಾನ್ಯ ವಿಜ್ಞಾನದಲ್ಲಿ 62, ಸಮಾಜ ವಿಜ್ಞಾನದಲ್ಲಿ 76 ಅಂಕ ಗಳಿಸಿದ್ದಾನೆ. ಇದೀಗ ಉಡುಪಿಯ ಮಹಾತ್ಮಾಗಾಂಧಿ ಸ್ಮಾರಕ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಾನೆ.