ಯುನೈಟೆಡ್ ನಾಗಾ ಕೌನ್ಸಿಲ್ ಕಳೆದ ನ. 1ರಿಂದ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಆರ್ಥಿಕ ದಿಗ್ಬಂಧನ ಹೇರಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು. 

ಇಂಫಾಲ(ಡಿ.20): ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಇಂಫಾಲ ಪಶ್ಚಿಮ ಮತ್ತು ಇಂಫಾಲ ಪೂರ್ವ ಜಿಲ್ಲೆಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸಡಿಲಗೊಳಿಸಲಾಗಿದೆ.

ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಂಗಳವಾರ 9 ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಿರುವ ಬಗ್ಗೆ ಘೋಷಿಸಿದ್ದಾರೆ. ಇಂಫಾಲ್-ಉಖ್ರುಲ್ ರಸ್ತೆಯಲ್ಲಿ 22 ವಾಹನಗಳಿಗೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿದ್ದ ಹಿನ್ನೆಲೆಯಲ್ಲಿ ಭಾನುವಾರ ಇಂಫಾಲ ಪೂರ್ವ ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಗಿತ್ತು. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಸಂಜೆಯಿಂದ ಮುಂಜಾನೆ ವರೆಗೆ ಕರ್ಫ್ಯೂ ವಿಧಿಸಲಾಗಿತ್ತು.

ಯುನೈಟೆಡ್ ನಾಗಾ ಕೌನ್ಸಿಲ್ ಕಳೆದ ನ. 1ರಿಂದ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಆರ್ಥಿಕ ದಿಗ್ಬಂಧನ ಹೇರಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು. ಸದ್ಯದ ಪರಿಸ್ಥಿತಿಯ ಬಗ್ಗೆ ಮಣಿಪುರ ಸಿಎಂ ಒ ಇಬೊಬಿ ಸಿಂಗ್ ಸಚಿವ ಸಂಪುಟ ಸಭೆ ನಡೆಸಿ ವಿವರಣೆ ಪಡೆದಿದ್ದಾರೆ.

ಈ ನಡುವೆ ರಾಜ್ಯದ ಜನತೆಗೆ ರಕ್ಷಣೆ ನೀಡದಿದ್ದರೆ, ಮಣಿಪುರದ ಎಲ್ಲ ರಸ್ತೆಗಳಲ್ಲಿ ವಾಹನ ಸಂಚಾರ ತಡೆಹಿಡಿದು ಸಂಪೂರ್ಣ ದಿಗ್ಬಂಧನ ಹೇರುವುದಾಗಿ ನಾಗಾ ಸ್ಟುಡೆಂಟ್ಸ್ ಫೆಡರೇಶನ್ (ಎನ್‌'ಎಸ್‌'ಎಫ್) ಘೋಷಿಸಿದೆ.