ನವದೆಹಲಿ(ಜ.08): ಅತಿಯಾದ ಬುದ್ದಿವಂತಿಕೆ ಕೂಡ ಕೆಲವೊಮ್ಮೆ ವೈಯಕ್ತಿಕ ಮತ್ತು ಸಾಮಾಜಿಕ ಹಾನಿಗೆ ಕಾರಣವಾಗಬಲ್ಲದು ಎಂಬುದಕ್ಕೆ ಕಾಂಗ್ರೆಸ್ ಉಚ್ಛಾಟಿತ ನಾಯಕ ಮಣಿಶಂಕರ್ ಅಯ್ಯರ್ ಎಂಬ ಮೇಧಾವಿ ಜ್ವಲಂತ ಉದಾಹರಣೆ.

ತಮ್ಮ ಅಭಿಪ್ರಾಯವೇನು ಎಂಬುದನ್ನಷ್ಟೇ ಮಂಡಿಸದೇ ಅದರೊಂದಿಗೆ ವಿವಾದವನ್ನೂ ತಳುಕು ಹಾಕುವ ನಡೆಯಿಂದಾಗಿ ಸಾಮಾಜಿಕ ಹಾನಿಗೆ ಯ್ಯರ್ ಅನೇಕ ಬಾರಿ ಕಾರಣರಾಗಿದ್ದಾರೆ. ಅದರಂತೆ ಅಯ್ಯರ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಯ ರಾಮ ಮಂದಿರದ ವಿಷಯದಲ್ಲಿ ಮತ್ತೆ ಹಿಂದೂಗಳ ಭಾವನೆ ಕೆರಳಿಸುವಂತ ಸರಣಿ ಹೇಳಿಕೆಗಳನ್ನು ಮಣಿಶಂಕರ್ ಅಯ್ಯರ್ ನೀಡಿದ್ದಾರೆ. ಏಕ್ ಶಾಮ್ ಬಾಬ್ರಿ ಮಸ್ಜೀದ್ ಕೆ ನಾಮ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಶರಥನ ಮಹಲಿನಲ್ಲಿ ಸಾವಿರ ಕೋಣೆಗಳಿದ್ದವು. ಈ ಪೈಕಿ ರಾಮ ಎಲ್ಲಿ ಹುಟ್ಟಿದ್ದೋ ಯಾರಿಗೆ ಗೊತ್ತಿರುತ್ತೆ? ನಿಖರವಾಗಿ ಹೇಗೆ ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ. 

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ- ರಾಮ ಮಂದಿರದ ಬಗ್ಗೆ ಮಾತನಾಡಿರುವ ಅಯ್ಯರ್, ಬಾಬ್ರಿ ಮಸೀದಿ ಧ್ವಂಸಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ‘ನಾನು ಕಾಂಗ್ರೆಸ್ಸಿಗ, ಬಾಬ್ರಿ ಮಸೀದಿ ವಿಷಯದಲ್ಲಿ ಪಕ್ಷ ತಪ್ಪು ಮಾಡಿದೆ..’ಎಂದು ಅಯ್ಯರ್ ನುಡಿದಿದ್ದಾರೆ.

ಬಾಬ್ರಿ ಮಸೀದಿ ಧ್ವಂಸಗೊಂಡ ದಿನ ಭಾರತದ ಅವನತಿಯಾಗಿತ್ತು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದು, ಬಾಬ್ರಿ ಮಸೀದಿ ಧ್ವಂಸ ಭಾರತವನ್ನು ವಿಭಜಿಸಲು ಎರಡನೇ ಯತ್ನವಾಗಿತ್ತು ಎಂದಿದ್ದಾರೆ.  

ರಾಮ ಮಂದಿರ ಬೇಕಾದವರು ಮಂದಿರ ನಿರ್ಮಿಸಿಕೊಳ್ಳಲಿ ಆದರೆ ಮಂದಿರವನ್ನು ಅಲ್ಲೇ ನಿರ್ಮಿಸುವೆವು ಎಂದು ಹೇಳುವುದಕ್ಕೆ ಹೇಗೆ ಸಾಧ್ಯ? ದಶರಥನ ಮಹಲಿನಲ್ಲಿ ಸಾವಿರ ಕೋಣೆಗಳಿದ್ದವು, ಈ ಪೈಕಿ ರಾಮ ಎಲ್ಲಿ ಹುಟ್ಟಿದ್ದೋ ಯಾರಿಗೆ ಗೊತ್ತಿರುತ್ತೆ? ಎಂದು ಅಯ್ಯರ್ ಪ್ರಶ್ನಿಸಿದ್ದಾರೆ.