ಬೆಂಗಳೂರು (ಮೇ. 08):  ಈ ಬಾರಿ ಮಾವಿನ ಇಳುವರಿಯೂ ಇಲ್ಲ, ಇದ್ದ ಮಾವಿಗೆ ಹೇಳಿಕೊಳ್ಳುವಂತಹ ಬೆಲೆಯೂ ಇಲ್ಲ!

ಹೌದು. ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬೆಳೆದ ಆಲ್ಫಾನ್ಸೋ (ಆಪೋಸ್) ಈ ವರ್ಷ ಸಂಕಷ್ಟದ ಸ್ಥಿತಿಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಮಾವು ಬರುತ್ತಿಲ್ಲ. ಇದ್ದ ಮಾವನ್ನು ಮಾರಬೇಕೆಂದರೆ ಸಮಾಧಾನಕರ ಬೆಲೆಯೂ ಇಲ್ಲ. ಹೀಗಾಗಿ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಯರಿಕೊಪ್ಪ ಹಾಗೂ ಧಾರವಾಡದ ಈದ್ಗಾ ಮೈದಾನದಲ್ಲಿ ಈಗಾಗಲೇ ಟೇಬಲ್ ಖರೀದಿ (ಸುರಕ್ಷಿತವಾಗಿ ಕಾಯಿ ಕಿತ್ತು ಟ್ರೇಗಳಲ್ಲಿ ಮಾರುವ) ಶುರುವಾಗಿದೆ. ಬುಧವಾರದಿಂದ ಮಾವಿನ ಕಾಯಿ ಸಗಟು (ಹೋಲ್‌ಸೇಲ್) ಮಾರಾಟವೂ ಆರಂಭವಾಗಲಿದೆ. ಟೇಬಲ್ ಖರೀದಿಯಲ್ಲಿ ಪ್ರತಿ ಕೆಜಿಗೆ ₹3 0ರಿಂದ ₹ 40 ಕ್ಕೆ ಮಾರಾಟವಾಗುತ್ತಿದ್ದರೆ, ಬುಧವಾರದಿಂದ ಶುರುವಾಗುವ ಸಗಟು ವ್ಯಾಪಾರದಲ್ಲಿ ಪ್ರತಿ ಕೆಜಿಗೆ ₹18 ರಿಂದ ₹ 20 ದರ ನಿಗದಿ ಮಾಡಲಾಗಿದೆ.

ಸಾಮಾನ್ಯವಾಗಿ ಮಾವಿನ ಇಳುವರಿ ಕಡಿಮೆ ಇದ್ದಾಗ ತಾನಾಗಿಯೇ ಅದರ ಬೆಲೆ ಹೆಚ್ಚುತ್ತದೆ. ಆದರೆ, ಈ ಬಾರಿ ಮಾರುಕಟ್ಟೆಗೆ ಕಾಲು ಭಾಗ ಮಾತ್ರ ಮಾವು ಬರುತ್ತಿದ್ದರೂ ಬೆಲೆ ಇಲ್ಲ. ಟೇಬಲ್ ಖರೀದಿಯಲ್ಲಿ ಕೆಜಿಗೆ ₹ 50 ಹಾಗೂ ಸಗಟಿನಲ್ಲಿ ಕೆಜಿಗೆ ₹ 30 ರ ವರೆಗೆ ಮಾರಾಟವಾದರೆ ಮಾತ್ರ ತುಸು ಲಾಭ. ಇಲ್ಲದಿದ್ದರೆ ನಷ್ಟ ನಿಶ್ಚಿತ ಎನ್ನುತ್ತಾರೆ ಬೆಳೆಗಾರರು.

ಕಾರಣವೇನು?:

ಈ ಬಾರಿ ಮಾವಿನ ಗಿಡಗಳು ಉತ್ತಮವಾಗಿ ಹೂವು ಬಿಟ್ಟಿದ್ದರೂ ಹವಾಮಾನ ವೈಪರೀತ್ಯದಿಂದ ಕಾಯಿ ಹಿಡಿಯದೆ ಮಾವಿನ ಇಳುವರಿಯಲ್ಲಿ ಇಳಿಮುಖವಾಗಿದ್ದು ಒಂದು ಕಡೆಯಾದರೆ, ಇನ್ನೊಂದೆಡೆ ಜ್ಯೂಸ್ ಕಂಪನಿಯವರು ಮಾವಿನ ಕಾಯಿ ಖರೀದಿಸಲು ಮೊದಲಿನಷ್ಟು ಆಸಕ್ತಿ ತೋರದಿರುವುದು ಮತ್ತೊಂದು ಕಾರಣ.

ಮೊದಲು ಜ್ಯೂಸ್ ತಯಾರಿಸಲು ಬರೀ ಆಲ್ಫಾನ್ಸೋ ಮಾತ್ರ ಬಳಸುತ್ತಿದ್ದರು. ಈಗ ಕಡಿಮೆ ಬೆಲೆ ಇರುವ ಕೇಸರ್, ಚಿತ್ರಾಪೈರಿಯಂಥ ಕಾಯಿಗಳನ್ನೂ ಆಲ್ಫಾನ್ಸೋ ಜತೆಗೆ ಮಿಕ್ಸ್ ಮಾಡುತ್ತಿರುವುದರಿಂದ ಆಲ್ಫಾನ್ಸೋ ಮಾವನ್ನು ನಿರೀಕ್ಷಿತ ಮಟ್ಟದಲ್ಲಿ ಖರೀದಿ ಮಾಡುತ್ತಿಲ್ಲ. ಹೀಗಾಗಿ ಮೊದಲಿನಂತೆ ಬೆಲೆ ಇಲ್ಲದಾಗಿದೆ ಎಂದು ಕೆಲಗೇರಿಯ ಮಾವು
ಬೆಳೆಗಾರ ದೇವೇಂದ್ರ ಜೈನರ್ ಹೇಳುತ್ತಾರೆ.

ಧಾರವಾಡ, ಕಲಘಟಗಿ ಹಾಗೂ ಹುಬ್ಬಳ್ಳಿ ಭಾಗದಲ್ಲಿ ಅಂದಾಜು 15 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗಿದೆ. ಮಾವು ಬೆಳೆಗಾರರು ತಂದ ಮಾವಿನ ಕಾಯಿಗಳನ್ನು ವ್ಯಾಪಾರಸ್ಥರು ಖರೀದಿ ಮಾಡಿ ಮಹಾರಾಷ್ಟ್ರ, ಆಂಧ್ರ, ಗುಜರಾತ್ ರಾಜ್ಯಗಳಲ್ಲಿನ ಜ್ಯೂಸ್ ಕಂಪನಿಗಳಿಗೆ ಮಾರುತ್ತಾರೆ. ಜತೆಗೆ ಒಂದಿಷ್ಟು ಪ್ರಮಾಣದಲ್ಲಿ ರೈತರು, ವ್ಯಾಪಾರಸ್ಥರು ಹಣ್ಣು ಮಾಡಿ ಧಾರವಾಡ ಸುತ್ತಮುತ್ತ ಮಾರಾಟ ಮಾಡುತ್ತಾರೆ. ಮಾವಿನ ಕಾಯಿಗೆ ಈ ಬಾರಿ ಬೆಲೆ ಕಡಿಮೆ ಇರುವುದರಿಂದ  ಹಣ್ಣು ಮಾಡುತ್ತಿದ್ದು ಹಣ್ಣಿನ ಬೆಲೆಯೂ ಇಳಿಮುಖ ಆಗುತ್ತಿದೆ ಎಂದು ಅಭಿಪ್ರಾಯಪಡುತ್ತಾರೆ ಬೆಳೆಗಾರರು.