ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಇನ್ನೂ ಡೋಲಾಯಮಾನ ಸ್ಥಿತಿಯಲ್ಲಿದೆ. ಬೈಕ್​ ರ್ಯಾಲಿಯನ್ನು ಶತಾಯ ಗತಾಯ ಹತ್ತಿಕ್ಕಲೇಬೇಕೆಂಬ ಹಠಕ್ಕೆ ರಾಜ್ಯ ಸರ್ಕಾರ ಬಿದ್ದಿದ್ದರೆ, ರ್ಯಾಲಿ ನಡೆಸಿಯೇ ತೀರಲು ಬಿಜೆಪಿ ಜಿದ್ದಿಗೆ ಬಿದ್ದಿದೆ.

ಬೆಂಗಳೂರು (ಸೆ.04): ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಇನ್ನೂ ಡೋಲಾಯಮಾನ ಸ್ಥಿತಿಯಲ್ಲಿದೆ. ಬೈಕ್​ ರ್ಯಾಲಿಯನ್ನು ಶತಾಯ ಗತಾಯ ಹತ್ತಿಕ್ಕಲೇಬೇಕೆಂಬ ಹಠಕ್ಕೆ ರಾಜ್ಯ ಸರ್ಕಾರ ಬಿದ್ದಿದ್ದರೆ, ರ್ಯಾಲಿ ನಡೆಸಿಯೇ ತೀರಲು ಬಿಜೆಪಿ ಜಿದ್ದಿಗೆ ಬಿದ್ದಿದೆ.

ಬಿಜೆಪಿ ರ್ಯಾಲಿಗೆ ಇನ್ನೂ ಸಿಕ್ಕಿಲ್ಲ ಅನುಮತಿ; ಬೆಂಗಳೂರಿನಿಂದ ನಾಳೆ ರ್ಯಾಲಿ ಆರಂಭಿಸಲು ಸಿದ್ಧತೆ

ಸೆ. 7ರಂದು ರಾಜ್ಯ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ಸಮಾವೇಶಕ್ಕೆ ಪೂರ್ವಭಾವಿಯಾಗಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್​ ರ್ಯಾಲಿ ಏನಾಗಲಿದೆ ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ರ್ಯಾಲಿ ತಡೆಯಲು ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಇರುವ ಎಲ್ಲಾ ಅಂಶಗಳನ್ನೂ ಬಳಸಿಕೊಳ್ಳುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಧಾರವಾರ ಹಾಗೂ ಮಂಗಳೂರು ಪೊಲೀಸ್​ ಆಯುಕ್ತರು ಈಗಾಗಲೇ ಬೈಕ್​ ರ್ಯಾಲಿಗೆ ಅನುಮತಿ ನಿರಾಕರಿಸಿದ್ದಾರೆ. ಈ ಮಧ್ಯೆ ರಾಜ್ಯ ಬಿಜೆಪಿ ನಿಯೋಗ ಗೃಹಸಚಿವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದೆ.

ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ರ್ಯಾಲಿ ಆರಂಭಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಆದರೆ ಅನುಮತಿ ಇನ್ನೂ ದೊರೆಯದಿರುವ ಕಾರಣದಿಂದ ನಾಳೆ ಏನಾಗಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ. ಈ ಮಧ್ಯೆ ಮಾರ್ಗ ಮಧ್ಯೆ ರ್ಯಾಲಿ ತೆರಳುವ ವೇಳೆ, ಊಟೋಪಹಾರಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್​ಗಳನ್ನು ಅಳವಡಿಸಿ ಅಡ್ಡಿಪಡಿಸಿರುವುದು ಬಿಜೆಪಿ ಸಿಟ್ಟಿಗೆ ಕಾರಣವಾಗಿದೆ.

 ಬೆಂಗಳೂರಿನಿಂದ ಹೊರಡುವ ರ್ಯಾಲಿ ಹಾಸನ, ಉಪ್ಪಿನಂಗಡಿ ಮಾರ್ಗವಾಗಿ ಮಂಗಳೂರಿಗೆ ತಲುಪುವ ಯೋಜನೆ ಹಾಕಿಕೊಂಡಿದ್ದು, ಪೊಲೀಸರಿಂದ ತಡೆ ವ್ಯಕ್ತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಬದಲಾಯಿಸುವ ಚಿಂತನೆಯಲ್ಲೂ ಬಿಜೆಪಿ ನಾಯಕರಿದ್ದಾರೆ. ಒಂದೆಡೆ ಸರ್ಕಾರ ಅನುಮತಿ ನಿರಾಕರಿಸಿರುವುದು ಮತ್ತೊಂದೆಡೆ ರ್ಯಾಲಿ ಯಶಸ್ಸಿಗೆ ಬಿಜೆಪಿ ಹಠ ತೊಟ್ಟಿದೆ. ಹೀಗಾಗಿ ನಾಳೆ ಏನಾಗಬಹುದು ಎಂಬ ಕುತೂಹಲವೂ ಹುಟ್ಟಿಕೊಂಡಿದೆ.