Asianet Suvarna News Asianet Suvarna News

ವೃದ್ಧರ ಶೋಷಣೆಯಲ್ಲಿ ಮಂಗಳೂರು ದೇಶದಲ್ಲೇ ನಂ.1

ಕರ್ನಾಟಕದ ಬಂದರು ನಗರಿ ಖ್ಯಾತಿಯ, ದೇಶದ ಕರಾವಳಿಯ ಮಹಾನಗರ ಗಳ ಪೈಕಿ ಒಂದಾಗಿರುವ ಮಂಗಳೂರಿನ ವೃದ್ಧರು ದೇಶದಲ್ಲೇ ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ ಎಂದು ವರದಿಯೊಂದು ಹೇಳಿದೆ. 

Mangalore reports most cases of elder abuse

ನವದೆಹಲಿ/ ಮಂಗಳೂರು: ಕರ್ನಾಟಕದ ಬಂದರು ನಗರಿ ಖ್ಯಾತಿಯ, ದೇಶದ ಕರಾವಳಿಯ ಮಹಾನಗರ ಗಳ ಪೈಕಿ ಒಂದಾಗಿರುವ ಮಂಗಳೂರಿನ ವೃದ್ಧರು ದೇಶದಲ್ಲೇ ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ ಎಂದು ವರದಿಯೊಂದು ಹೇಳಿದೆ. ಹೆಲ್ಪ್‌ಏಜ್ ಇಂಡಿಯಾ ಎಂಬ ದತ್ತಿ ಸಂಸ್ಥೆ ದೇಶದ 23 ನಗರಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ, ಮಂಗಳೂರಿನ  ಶೇ.47ರಷ್ಟು ಹಿರಿಯರು ತಾವು ಶೋಷಣೆಗೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ಇಷ್ಟೊಂದು ಪ್ರಮಾಣದಲ್ಲಿ ಹಿರಿಯ ಜೀವಗಳು ದೂರಿರುವುದು ಮಿಕ್ಕೆಲ್ಲಾ ನಗರಗಳಿಗಿಂತ ಅತಿ ಹೆಚ್ಚು. ಆದರೆ ಈ ವರದಿಗೆ ಮಂಗಳೂರು ಭಾಗದ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಿತ್ಯ ಭಾರೀ ಪ್ರಮಾಣದ ಕೌಟುಂಬಿಕ ಹಿಂಸೆ, ಗಲಾಟೆಗಳ ವರದಿ ಇದ್ದರೂ, ಮಂಗಳೂರು ಸಮೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿರುವುದು ಅನುಮಾನಾಸ್ಪದವಾಗಿದೆ. ಅದ ರಲ್ಲೂ ದೇಶಾದ್ಯಂತ 23 ನಗರಗಳ ಪೈಕಿ ಕೇವಲ5014 ಜನರನ್ನು ಸಂದರ್ಶಿಸಿ ಇಂಥದ್ದೊಂದು ವರದಿ ತಯಾ ರಿಸಿದ್ದು ಅದರಲ್ಲಿ ಮಂಗಳೂರಿಗೆ ಈ ಪಟ್ಟ ಕಟ್ಟಿರುವುದರ ಹಿಂದೆ ಸಾಕಷ್ಟು ಅನುಮಾನ ಮೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಜೊತೆಗೆ ಕರ್ನಾಟಕ ದಲ್ಲಿ ಟೈರ್ 1 ಮತ್ತು ಟೈರ್ 2 ಸಿಟಿಯಲ್ಲಿ ಇತರೆ ಹಲವು ನಗರಗಳೂ ಇದ್ದರೂ, ಮಂಗಳೂರನ್ನೇ ಆಯ್ಕೆ ಮಾಡಿ, ಶೋಷಣೆಯಲ್ಲಿ ನಂ.1 ಹಣೆಪಟ್ಟ ಕಟ್ಟಿರುವು ದರ ಹಿಂದೆಯೂ ಏನಾದರೂ ದುರುದ್ದೇಶ ಇರಬಹುದು. ಇದೊಂದು ಅವೈಜ್ಞಾನಿಕ ಸಮೀಕ್ಷಾ ವರದಿ ಎಂದು ಸ್ಥಳೀಯ ಜನಪ್ರತಿನಿಧಿಗಳು ಹೇಳಿದ್ದಾರೆ.

ಮಂಗಳೂರಿಗೆ ಕುಖ್ಯಾತಿ:  ಹೆಲ್ಪ್ ಏಜ್ ಇಂಡಿಯಾ ಸಂಸ್ಥೆ 2018ರ ಮೇ ತಿಂಗಳಲ್ಲಿ ದೇಶಾದ್ಯಂತ 23 ನಗರಗಳ 5014 ವೃದ್ಧರನ್ನು ಸಂದರ್ಶಿಸಿ ಅವರು ಕುಟುಂಬದಲ್ಲಿ ಅನುಭವಿಸುತ್ತಿರುವ ನೋವನ್ನು ಆಧರಿಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯ ಅನ್ವಯ ಮಂಗಳೂರಿನ ಶೇ. 47 ರಷ್ಟು ಹಿರಿಯರು ತಾವು ಶೋಷಣೆಗೆ ಒಳಗಾಗುತ್ತಿರುವುದಾಗಿ ಹೇಳಿದ್ದಾರೆ. ಮಂಗಳೂರು ನಂತರದ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತಿನ ಅಹಮದಾಬಾದ್ (ಶೇ.46), ಮಧ್ಯಪ್ರದೇಶ ರಾಜಧಾನಿ ಭೋಪಾಲ್ (ಶೇ.39), ಪಂಜಾಬ್‌ನ ಅಮೃತಸರ (ಶೇ.35) ಹಾಗೂ ರಾಷ್ಟ್ರ ರಾಜಧಾನಿ ದೆಹಲಿ (ಶೇ.33) ಸ್ಥಾನ ಪಡೆದು, ಟಾಪ್ - 5 ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. 

ಮಕ್ಕಳಿಂದಲೇ ಹೆಚ್ಚು ಶೋಷಣೆ: ಸೊಸೆಯಂದಿರಿಂದ ವೃದ್ಧರು ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ ಎಂದು ಈ ಹಿಂದೆ ಸಮೀಕ್ಷಾ ವರದಿಗಳು ಬಂದಿದ್ದವು. ವಿಶೇಷವೆಂದರೆ, ಈ ಬಾರಿಯ ಅಧ್ಯಯನದಲ್ಲಿ ವೃದ್ಧರಿಗೆ ಅವರು ಹೆತ್ತ ಗಂಡುಮಕ್ಕಳೇ ಹೆಚ್ಚು ಹಿಂಸೆ ನೀಡುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹಿರಿಯ ಜೀವಗಳು ತಮ್ಮ ಪುತ್ರರಿಂದ ಶೇ.52ರಷ್ಟು ಶೋಷಣೆಗೆ ಒಳಗಾದರೆ, ಸೊಸೆಯಂದಿರಿಂದ ಹಿಂಸೆಗೆ ತುತ್ತಾಗುವವರ ಪ್ರಮಾಣ ಶೇ.34ರಷ್ಟಿದೆ ಎಂದು ಹೆಲ್ಪ್‌ಏಜ್ ಸಂಸ್ಥೆಯ ಸಿಇಒ ಮ್ಯಾಥ್ಯೂ ಚೆರಿಯನ್ ಅವರು ತಿಳಿಸಿದ್ದಾರೆ.

ಯಾರಿಗೂ ಹೇಳಲ್ಲ: ತಮ್ಮ ಮನೆಯಲ್ಲೇ ಹಾಗೂ ತಾವು ಅತಿ ಹೆಚ್ಚು ನಂಬಿದವರಿಂದಲೇ ಶೋಷಣೆಗೆ ಒಳಗಾಗುತ್ತಿರುವ ಈ ಹಿರಿಯಜೀವಗಳ ಪೈಕಿ ಶೇ.82 ರಷ್ಟು ಮಂದಿ ಕುಟುಂಬದ ವಿಷಯ ಎಂಬ ಕಾರಣಕ್ಕೆ ಹಾಗೂ ಅದನ್ನು ಎದುರಿಸುವ ರೀತಿ ಗೊತ್ತಿಲ್ಲದೇ ಯಾರಿಗೂ ಹೇಳಿಕೊಳ್ಳುತ್ತಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಪರಿಹಾರ ಏನು?: ಈ ಸಮಸ್ಯೆಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳುವುದು, ಸಮಸ್ಯೆಯನ್ನು ನೀಗಿಸಲು ಇರುವ ಬಹುದೊಡ್ಡ ಮಾರ್ಗ ಎಂದು ಶೇ.38ರಷ್ಟು ಹಿರಿಯರು ಹೇಳಿದ್ದಾರೆ. ಅಲ್ಲದೆ ತಮಗೂ ಹೊಸ ತಂತ್ರಜ್ಞಾನದ ಅರಿವು ಮೂಡಿಸಿದರೆ ಅದು ಮಕ್ಕಳು ಮತ್ತು ತಮ್ಮ ನಡುವೆ ಕಾಡಿರುವ ತಂತ್ರಜ್ಞಾನದ ಅಂತರ ಕಡಿಮೆ ಮಾಡಲು ನೆರವಾಗಬಲ್ಲದು ಎಂದು ಹಲವು ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸಹಾಯವಾಣಿ: ಈ ರೀತಿ ಹಿಂಸೆಗೆ ಒಳಗಾಗುವ ವೃದ್ಧರಿಗೆ ನೆರವಾಗುವ ಉದ್ದೇಶದಿಂದ ಹೆಲ್ಪ್‌ಏಜ್ ಸಂಸ್ಥೆ ನಿಶ್ಶುಲ್ಕ  ಸಹಾಯ ವಾಣಿಯೊಂದನ್ನೂ ತೆರೆದಿದೆ. ಇದಲ್ಲದೆ ಹಿರಿಯ ಜೀವಗಳ ಶೋಷಣೆ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ಈ ಸಂಸ್ಥೆಗೆ ದೇಶದ ವಿವಿಧ ಭಾಗಗಳ 300 ಜನರ ಜತೆಗೂಡಿ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಶುಕ್ರವಾರ ಮೋಂಬತ್ತಿ ಮೆರವಣಿಗೆಯನ್ನೂ ನಡೆಸುತ್ತಿದೆ.


ಶೋಷಣೆಗೆ ತಂತ್ರಜ್ಞಾನವೇ ಕಾರಣ!

ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಬಹಳಷ್ಟು ಜನ ಆಧುನಿಕ ತಂತ್ರಜ್ಞಾನವೇ ತಮ್ಮ ಶೋಷಣೆಗೆ ಕಾರಣ ಎಂದು ದೂರಿದ್ದಾರೆ. ಹೊಸ ಹೊಸ ತಂತ್ರಜ್ಞಾನವು ತಮ್ಮನ್ನು ಕುಟುಂಬದಲ್ಲಿ ಏಕಾಂಗಿ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶೇ.65ರಷ್ಟು ಹಿರಿಯರು, ಕುಟುಂಬದ ಕಿರಿಯ ಸದಸ್ಯರು ತಮಗಿಂತ ಮೊಬೈಲ್ ಮತ್ತು ಕಂಪ್ಯೂಟರ್‌ಗೆ ಹೆಚ್ಚಿನ ಆದ್ಯತೆ ನೀಡುವುದು ತಮಗೆ ಅಗೌರವ ತೋರಿದಂತೆ ಎಂದು ಹೇಳಿದ್ದಾರೆ. 

ಮಕ್ಕಳು ಮನೆಯಲ್ಲಿ ತಮ್ಮ ಜೊತೆ ಇದ್ದ ವೇಳೆಯೂ ಮೊಬೈಲ್‌ನಲ್ಲಿ ತಲ್ಲೀನನಾಗಿರುತ್ತಾರೆ ಎಂದು ಶೇ.73ರಷ್ಟು ಹಿರಿಯರು ಹೇಳಿದ್ದಾರೆ. ಮಕ್ಕಳು ಮತ್ತು ಮೊಮ್ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ ನಾವು ಅವರೊಂದಿಗೆ ಕಳೆಯುತ್ತಿದ್ದ ಅನ್ಯೋನ್ಯತೆ ಸಮಯ ಕುಂಠಿತವಾಗಿದೆ ಎಂದು ಶೇ.60ರಷ್ಟು ಹಿರಿಯರು ಹೇಳಿದ್ದಾರೆ. ಅನ್‌ಲೈನ್ ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ತಮ್ಮಿಂದ ದೂರ ಮಾಡಿದೆ ಎಂದು ಶೇ.78ರಷ್ಟು ಹಿರಿಯರು ನೋವು ತೋಡಿಕೊಂಡಿದ್ದಾರೆ.

Follow Us:
Download App:
  • android
  • ios