Asianet Suvarna News Asianet Suvarna News

ಗೋಸಾಕಣೆ ಮಾಡಿ BMW ಕಾರು ಖರೀದಿಸಿದ !

ವ್ಯಕ್ತಿಯೊಬ್ಬರು ಗೋಸಾಕಣೆಯಿಂದಲೇ ದುಬಾರಿ ಬಿಎಂಡಬ್ಲ್ಯು ಕಾರು ಕೂಡ ಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅಪ್ಪಟ ದೇಸಿ ತಳಿಗಳ ದನಗಳನ್ನು ಸಾಕಿರುವ ಚಿತ್ರದುರ್ಗದ ಹಿರಿಯೂರಿನ ರಾಘವೇಂದ್ರ ಈ ಸಾಧನೆ ಮೆರೆದಿದ್ದಾರೆ.

Mangalore man buys BMW by dairy farming
Author
Bengaluru, First Published Jan 9, 2019, 12:16 PM IST

ಮಂಗಳೂರು :  ದನ ಕಾಯೋನು ಎಂದು ಮೂಗು ಮುರಿಯುವ ಕಾಲದಲ್ಲಿ ವ್ಯಕ್ತಿಯೊಬ್ಬರು ಗೋಸಾಕಣೆಯಿಂದಲೇ ದುಬಾರಿ ಬಿಎಂಡಬ್ಲ್ಯು ಕಾರು ಕೂಡ ಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅಪ್ಪಟ ದೇಸಿ ತಳಿಗಳ ದನಗಳನ್ನು ಸಾಕಿರುವ ಚಿತ್ರದುರ್ಗದ ಹಿರಿಯೂರಿನ ರಾಘವೇಂದ್ರ ಈ ಸಾಧನೆ ಮೆರೆದವರು. ಬೆಂಗಳೂರಿನ ರಾಜಾಜಿನಗರದ ನಿವಾಸಿಯಾದ ಇವರು, ಹಿರಿಯೂರಿಂದ ಬೆಂಗಳೂರಿಗೆ ಮುಂದೊಂದು ದಿನ ಹೆಲಿಕಾಪ್ಟರ್‌ನಲ್ಲೇ ಓಡಾಡುವ ಹೆಬ್ಬಯಕೆಯನ್ನೂ ಹೊಂದಿದ್ದಾರೆ!

ಓಟಕ್ಕೆ ನಿಂತ್ರೆ ಮೀರಿಸುವವರೇ ಇಲ್ಲ; ಇವನೇ ಕಂಬಳದ ಸೂಪರ್ ಸ್ಟಾರ್

ಗೋಸಾಕಣೆ ಬಗ್ಗೆ ಆರಂಭದಲ್ಲಿ ಇವರಿಗೆ ಅಷ್ಟೇನೂ ಮಾಹಿತಿ ಇರಲಿಲ್ಲ. ಭಾರತೀಯ ಗೋತಳಿ ನಶಿಸುತ್ತಿದೆ ಎಂಬುದು ಮಾತ್ರ ಇವರಿಗೆ ತಿಳಿದಿತ್ತು. ಒಮ್ಮೆ ಬೆಂಗಳೂರಲ್ಲಿ ದೇಸಿ ಹಸು ಸಾಕಿದವರಲ್ಲಿ ಹಾಲು (ಎ2 ಹಾಲು) ಕೇಳಲು ಹೋದಾಗ, ಅವರು ಹಾಲು ನೀಡಲು ನೀರಾಕರಿಸಿದ್ದೇ ಮುಂದೊಂದು ದಿನ ರಾಘವೇಂದ್ರ ಅವರು ಡೈರಿ ಫಾರ್ಮ್ ಆರಂಭಿಸಲು ಕಾರಣವಾಗುತ್ತದೆ.

ಒಂದು ಹಸುವಿನಿಂದ ಆರಂಭ:

ರಾಘವೇಂದ್ರ ಅವರು ಆರಂಭದಲ್ಲಿ ಒಂದು ಮಲೆನಾಡು ಗಿಡ್ಡ ಹಸುವನ್ನು ಬೆಂಗಳೂರಿನ ಮನೆಯಲ್ಲೇ ಸಾಕಿ ಪ್ಯಾಕೆಟ್‌ ಹಾಲಿಗೆ ಗುಡ್‌ ಬೈ ಹೇಳಿದವರು. ಇನ್ನಷ್ಟು ದೇಸಿ ಹಸುಗಳನ್ನು ಯಾಕೆ ಸಾಕಬಾರದು ಎಂದೆನಿಸಿ ಚಿತ್ರದುರ್ಗ, ದಾವಣಗೆರೆ ಕಡೆ ಸುತ್ತಾಡಿದರು. ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಹಸುಗಳನ್ನು ಖರೀದಿಸಿದರು. ಹಿರಿಯೂರಿನಲ್ಲಿ ದಾಳಿಂಬೆ ಬೆಳೆಯಲೆಂದು ಖರೀದಿಸಿದ್ದ ನಾಲ್ಕೂವರೆ ಎಕ್ರೆ ಜಾಗ ಗೋಸಾಕಣೆಗೆ ಪ್ರಯೋಜನವಾಯಿತು. ಅಲ್ಲಿಯೇ ಸ್ವರ್ಣಭೂಮಿ ಗೋಶಾಲೆ ಆರಂಭಿಸಿದರು. ಮುಂದಿನದು ಈಗ ಇತಿಹಾಸ. ಇವೆಲ್ಲ ನಡೆದದ್ದು ಕೇವಲ ನಾಲ್ಕೂವರೆ ವರ್ಷಗಳ ಹಿಂದೆ. ಈಗ ಇವರ ಗೋಶಾಲೆಯಲ್ಲಿ 300 ಹಸುಗಳಿವೆ. ಮಲೆನಾಡು ಗಿಡ್ಡ, ದೇವಣಿ, ಹಳ್ಳಿಕಾರ್‌ ಹಾಗೂ ಅಮೃತ ಮಹಲ್‌ ತಳಿಯ ಹಸುಗಳೇ ಇವರ ಗೋಶಾಲೆಯನ್ನು ತುಂಬಿವೆ. ಮುಂದೆ 1000 ಹಸುಗಳನ್ನು ಸಾಕುವ ಉದ್ದೇಶ ಹೊಂದಿದ್ದಾರೆ.

ಸಗಣಿ, ಗೋಮೂತ್ರ ಆದಾಯ!:

‘ಗೋರಾಘವೇಂದ್ರ’ ಎಂದೇ ಚಿರಪರಿಚಿತರಾಗಿರುವ ಇವರ ಫಾರ್ಮಲ್ಲಿ 300 ಹಸುಗಳಿವೆಯಾದರೂ ಕೆಲವು ಕರುಗಳು, ಕೆಲವು ವಯಸ್ಸಾದವು, ಇನ್ನು ಕೆಲವು ಹೋರಿಗಳು. ಆದರೂ ಎಲ್ಲವನ್ನೂ ಅವರು ಪ್ರೀತಿಯಿಂದಲೇ ಸಾಕುತ್ತಿದ್ದಾರೆ. ಫಾರ್ಮಲ್ಲಿ ಕೇವಲ 60 ರಿಂದ 70 ಲೀಟರ್‌ (ಎ2) ಹಾಲಿನ ಉತ್ಪಾದನೆಯಾಗುತ್ತಿದೆ. ಗೋಶಾಲೆಯ ಉಪ ಉತ್ಪನ್ನಗಳಿಂದಲೇ ಗೋರಾಘವೇಂದ್ರ ಅವರು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಹತ್ತು ಹಲವು ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಗಣಿ, ಬೆರಣಿ, ವಿಭೂತಿ, ದಂತಮಂಜನ್‌, ಗೋಅರ್ಕಗಳ ಮಾರಾಟದಿಂದಲೇ ಉತ್ತಮ ಲಾಭ ಕಂಡುಕೊಂಡಿದ್ದಾರೆ.

ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಬಂಪರ್

‘ಗೋವುಗಳನ್ನು ನಾನು ಲಾಭಕ್ಕೋಸ್ಕರ ಸಾಕುತ್ತಿಲ್ಲ. ಗೋವಿನ ಮೇಲಿನ ಪ್ರೀತಿಯಿಂದ ಸಾಕುತ್ತಿದ್ದೇನೆ. ಗೋವನ್ನು ನಂಬಿದರೆ ಯಾವುದಕ್ಕೂ ಕೊರತೆಯಿಲ್ಲ ಎಂಬುದಕ್ಕೆ ನಾನೇ ಉದಾಹರಣೆ. ಗೋವುಗಳನ್ನು ವಯಸ್ಸಾಯಿತೆಂದು ಕಸಾಯಿಖಾನೆಗೆ ಹೊಡೆಯದಿರಿ. ನಮಗೆ ಕೊಡಿ, ನಾವು ಸಾಕುತ್ತೇವೆ’ ಎನ್ನುತ್ತಾರೆ ಗೋರಾಘವೇಂದ್ರ.

ಬೆರಣಿಯ ಹಿರಿಮೆ:

ಇವರು ತಯಾರಿಸುವ ಕೌಡಂಗ್‌ ಕೇಕ್‌ಗೆ ಉತ್ತಮ ಬೇಡಿಕೆ ಇದೆ. ಕೃಷಿಮೇಳ ಸೇರಿದಂತೆ ಹೋದಲ್ಲೆಲ್ಲ ಬೆರಣಿಯ ಹಿರಿಮೆಯನ್ನು ವಿವರಿಸುತ್ತಾ ಹೋಗುತ್ತಿದ್ದಾರೆ. ದೇಸಿ ಹಸುವಿನ ಹಾಲು, ತುಪ್ಪ, ಗೋಮೂತ್ರ, ಗೋಅರ್ಕಗಳ, ಪಂಚಗವ್ಯಗಳ ಬಳಕೆಯಿಂದಾಗುವ ಪ್ರಯೋಜನ ವಿವರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆ ಕರೆದಲ್ಲೆಲ್ಲ ತೆರಳಿ ಗೋವು ಹಾಗೂ ಗೋಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಐದು ದೊಡ್ಡ ಗಾತ್ರದ ಬೆರಣಿಯ ಪ್ಯಾಕ್‌ 40 ರುಪಾಯಿಗೆ ಮಾರಾಟವಾಗುತ್ತಿದೆ. ಬೆರಣಿಯಿಂದ ಪಾತ್ರೆ ತೊಳೆಯುವ ಗೋಭಸ್ಮ ತಯಾರಿಸುತ್ತಿದ್ದಾರೆ. ಹಿರಿಯೂರು ಫಾರ್ಮಲ್ಲಿ ಬೇಕಾದವರಿಗೆ ಹಸಿ ಸಗಣಿಯನ್ನೂ ಮಾರಾಟ ಮಾಡುತ್ತಿದ್ದಾರೆ. ಮುಂದೆ ಉತ್ಪನ್ನಗಳನ್ನು ಆನ್‌ಲೈನ್‌ ಮಾರುಕಟ್ಟೆಗೆ ಬಿಡಲು ಯೋಜನೆ ರೂಪಿಸುತ್ತಿದ್ದಾರೆ.

ಮುಂದೆ ತರಬೇತಿ:

ಗೋಸಾಕಣೆ ಬಗ್ಗೆ ರಾಜ್ಯದಲ್ಲಿ ಯಾವುದೇ ಅಧಿಕೃತ ತರಬೇತಿ ಸಂಸ್ಥೆಯಿಲ್ಲ. ಕಳೆದ ತಿಂಗಳು ಹಿರಿಯೂರಿನ ಗೋಶಾಲೆಯಲ್ಲಿ 30 ಜನರಿಗೆ ಪ್ರಶಿಕ್ಷಣ ನೀಡಲಾಗಿದೆ. ಮುಂದೆ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಬೇಕೆಂದು ರಾಘವೇಂದ್ರ ಅವರು ಯೋಜನೆ ರೂಪಿಸುತ್ತಿದ್ದಾರೆ.

ನಾಯಿಗಳ ರಕ್ಷಣೆಗೆ ದೇಶದಲ್ಲಿ ಸಾವಿರಕ್ಕೂ ಅಧಿಕ ಎನ್‌ಜಿಓಗಳಿವೆ. ಮಾನವನಿಗೆ ಹಾಲು, ಮೊಸರು, ತುಪ್ಪ ನೀಡುವ ಗೋವುಗಳನ್ನು ಸಾಕಲು ಯಾವುದೇ ಎನ್‌ಜಿಓಗಳು ಮುಂದೆ ಬರುತ್ತಿಲ್ಲ. ಸರ್ಕಾರ ಕೋಟ್ಯಂತರ ಹಣವನ್ನು ವ್ಯಯಿಸುತ್ತಿದೆ. ಆದರೆ ಗೋಶಾಲೆಗಳಿಗೆ ಬರುತ್ತಿದ್ದ ಅನುದಾನವನ್ನು ನಿಲ್ಲಿಸಿ ಬಿಟ್ಟಿದೆ.

-ಗೋರಾಘವೇಂದ್ರ, ಗೋಸಾಕಣೆದಾರ, ಹಿರಿಯೂರು

ವರದಿ :  ರಾಘವೇಂದ್ರ ಅಗ್ನಿಹೋತ್ರಿ

Follow Us:
Download App:
  • android
  • ios