ಮಂಡ್ಯ(ಸೆ.11): ಮಂಡ್ಯದಲ್ಲಿ ರೈತ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಇಂದು ಮತ್ತೊಬ್ಬ ರೈತ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. 

ಪಾಂಡವಪುರ ತಾಲೂಕಿನ ಜವರೇಗೌಡ ಕೊಪ್ಪಲು ಗ್ರಾಮದ ಮಾದೇಗೌಡ(50) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಈತ ವಿವಿಧ ಬ್ಯಾಂಕಿನಲ್ಲಿ ಒಟ್ಟು 3.5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. 

ಒಂದು ಕಡೆ ಸಾಲ ಮಾಡಿ 3 ಬೋರ್ ವೆಲ್‌ಗಳನ್ನು ಕೊರೆಸಿದ್ದ ಮಾದೇಗೌಡ, ಆದರೆ ನೀರು ಬರದೆ ನಷ್ಟ ಅನುಭವಿಸಿದ್ದರು. ಅದಲ್ಲದೇ ಜಮೀನಿಗೆ ಹರಿಯುತ್ತಿದ್ದ ಕಾವೇರಿ ನೀರನ್ನು ಸಹ ನಿಲ್ಲಿಸಿದ್ದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. 

ಸ್ಥಳಕ್ಕೆ ಸಂಸದ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ, ತಹಶೀಲ್ದಾರ್ ಭೇಟಿ ನೀಡಿದ್ದಾರೆ, ಈ ಸಂದರ್ಭದಲ್ಲಿ ಮೃತ ರೈತ ಕುಟುಂಬಕ್ಕೆ ಜಿಲ್ಲಾಡಳಿತ 5 ಲಕ್ಷ ರೂಪಾಯಿ ನೀಡುವಂತೆ ಸಿ.ಎಸ್,ಪುಟ್ಟರಾಜು ಆಗ್ರಹಿಸಿದ್ದಾರೆ. ಇದಲ್ಲದೇ ಮಂಡ್ಯದಲ್ಲಿ ರೈತ ಆತ್ಮಹತ್ಯೆ ಮಾಡಿಕೊಳ್ಳದಂತೆ ಸಂಸದರು ಮನವಿ ಮಾಡಿದ್ದಾರೆ.