ಮಂಡ್ಯ(ಸೆ. 06): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಹಿನ್ನಡೆಯುಂಟಾಗಿದ್ದು, ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದನ್ನು ಖಂಡಿಸಿ ಇಂದು ಮಂಡ್ಯಜಿಲ್ಲಾ ಬಂದ್'ಗೆ ಕರೆ ನೀಡಲಾಗಿದೆ. ಇತ್ತ, ಹೇಮಾವತಿ ಜಲಾಶಯದಿಂದ ನೀರು ಹೊರಬಿಡದಂತೆ ಜೆಡಿಎಸ್ ಹಾಗೂ ಕನ್ನಡಪರ ಸಂಘಟನೆಗಳು ಗೊರೂರು ಬಂದ್'ಗೆ ಕರೆ ನೀಡಿದ್ದಾರೆ.

ಗಾಂಧಿಭವನದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ನೇತೃತ್ವದಲ್ಲಿ ನಿನ್ನೆ ರೈತರು ಮತ್ತು ಹೋರಾಟಗಾರರ ಸಭೆ ನಡೀತು. ಈ ಸಭೆಯಲ್ಲಿ ಕೆಲ ನಿರ್ಣಯಗಳನ್ನ ಕೈಗೊಂಡಿದ್ದು ಪ್ರಮುಖವಾಗಿ ಇಂದು ಮಂಡ್ಯ ಬಂದ್ ಗೆ ಕರೆ ನೀಡಲಾಗಿದೆ. ಈ ಹೋರಾಟಕ್ಕೆ ಬೆಂಗಳೂರಿಗರು ಪಾಲ್ಗೊಳ್ಳುವಂತೆಯೂ ಪುಟ್ಟಣ್ಣಯ್ಯ ಮನವಿ ಮಾಡಿದ್ರು.

ಈ ಬಂದ್'ನ ಬಿಸಿ ರಾಜಧಾನಿಗೆ ತಟ್ಟುವ ಸಾಧ್ಯತೆಯಿದೆ. ಜಿಲ್ಲಾಡಳಿತ ಸಹ ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತೆ ಕ್ರಮವಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ರಜೆ ಘೋಷಣೆ:
ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಮಂಡ್ಯ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 4,200 ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಆರ್'ಎಸ್'ನ ಬೃಂದಾವನದಲ್ಲಿ ಸೆ.9ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

ಹೋರಾಟಗಾರರು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. ಒಂದು ವೇಳೆ ಹಿಂಸಾಚಾರ ನಡೆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಲ್ಲಾ ತಾಲೂಕುಗಳಲ್ಲೂ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ, ಬಂದ್'ನಿಂದಾಗಿ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿವಾರಿಸಲು ವಿಶೇಷ ಫೇಸ್ಬುಕ್ ಪುಟವನ್ನು ಆರಂಭಿಸಲಾಗಿದೆ ಎಂದು ಮಂಡ್ಯ ಎಸ್'ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ವಿವಿಧಡೆ ಪ್ರತಿಭಟನೆ, ಆಕ್ರೋಶ:
ಸುಪ್ರಿಂ ಕೋರ್ಟ್ ತೀರ್ಪು ವಿರೋಧಿಸಿ ವಿವಿಧ ಸಂಘಟನೆಗಳು ನ ಿನ್ನೆ ಹಾಸನದಲ್ಲಿ ಹಾಗೂ ಹೇಮಾವತಿ ಜಲಾಶಯದ ಪ್ರತಿಮೆ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲೂ ಪ್ರತಿಭಟನೆ:
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ 100ಕ್ಕೂ ಹೆಚ್ಚು ಜಯ ಕರ್ನಾಟಕ ಕಾರ್ಯಕರ್ತರು ಮಾನವಿ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.