Asianet Suvarna News Asianet Suvarna News

ಭ್ರೂಣ ಹತ್ಯೆ, ಲಿಂಗ ಪತ್ತೆಯಲ್ಲಿ ಮಂಡ್ಯ, ರಾಮನಗರ ಮುಂದು!

ರೇಷ್ಮೆ ನಗರಿ ರಾಮನಗರ ಹಾಗೂ ಸಕ್ಕರೆ ನಗರ ಮಂಡ್ಯಕ್ಕೆ ಇದೀಗ ಕಳಂಕವೊಂದು ತಟ್ಟುವ ಸಂದರ್ಭ ನಿರ್ಮಾಣವಾಗಿದೆ. ಅದು, ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ವಿಚಾರದಲ್ಲಿ ರಾಜ್ಯದಲ್ಲೇ ಮುಂಚೂಣಿ ನಗರಗಳು ಎಂಬುದು.

Mandya and ramanagara are in first place prolicide

ಮಂಡ್ಯ(ಜು.17): ರೇಷ್ಮೆ ನಗರಿ ರಾಮನಗರ ಹಾಗೂ ಸಕ್ಕರೆ ನಗರ ಮಂಡ್ಯಕ್ಕೆ ಇದೀಗ ಕಳಂಕವೊಂದು ತಟ್ಟುವ ಸಂದರ್ಭ ನಿರ್ಮಾಣವಾಗಿದೆ. ಅದು, ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ವಿಚಾರದಲ್ಲಿ ರಾಜ್ಯದಲ್ಲೇ ಮುಂಚೂಣಿ ನಗರಗಳು ಎಂಬುದು.

ಹೌದು, ಇಂತಹದೊಂದು ಗಂಭೀರ ಸಾಧ್ಯತೆ ಯಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿದ ಸಮೀಕ್ಷೆ ಎಚ್ಚರಿಸಿದೆ. ಏಕೆಂದರೆ, ಈ ಎರಡು ನಗರಗಳಲ್ಲಿ ಅಕ್ರಮವಾಗಿ ಲಿಂಗಪತ್ತೆ ಕಾರ್ಯ ಅವ್ಯಾಹತವಾಗಿ ನಡೆದಿದೆ. ಅಷ್ಟೇ ಅಲ್ಲ, ನೆರೆ ಹೊರೆಯ ಜಿಲ್ಲೆಗಳಿಂದ ಜನರು ಈ ಜಿಲ್ಲೆಗಳಿಗೆ ತೆರಳಿ ಲಿಂಗ ಪತ್ತೆ ಮಾಡಿಸಿ, ಹೆಣ್ಣು ಶಿಶುವಾಗಿದ್ದರೇ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಗಂಭೀರ ಹಂತ ಮುಟ್ಟಿದ್ದರೂ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತಿದೆ. ಏಕೆಂದರೆ, ಈ ಲಿಂಗ ಪತ್ತೆ ಕೇಂದ್ರಗಳ ಮಾಲೀಕತ್ವ ರಾಜಕೀಯವಾಗಿ ಪ್ರಭಾವಿಗಳ ಕೈಯಲ್ಲಿ ಇದೆ. ಹೀಗಂತ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವಾ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಳೆದ ನಾಲ್ಕು ತಿಂಗಳ ಅವಧಿ ಕಾಲ ಕ್ಷೇತ್ರಾಧ್ಯಯನ ನಡೆಸಿ ‘ಹೆಣ್ಣು ಮಕ್ಕಳ ನಕಾರಾತ್ಮಕ ಧೋರಣೆಗೆ ಕಾರಣವಾಗಿರುವ ಸಾಮಾಜಿಕ ಸಾಂಸ್ಕೃತಿಕ ಅಧ್ಯಯನ ವರದಿ’ಯಲ್ಲಿ ಉಲ್ಲೇಖವಾಗಿದೆ.

ವಿಜಯಪುರ, ಬಾಗಲಕೋಟೆ, ರಾಮನಗರ, ಮಂಡ್ಯದಲ್ಲಿ ಈ ಸಮೀಕ್ಷಾ ಕಾರ್ಯ ನಡೆಸಲಾಗಿದ್ದು, ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದೆ. ‘ಕನ್ನಡಪ್ರಭ’ಕ್ಕೆ ಈ ವರದಿಯ ಪ್ರತಿ ಲಭ್ಯವಾಗಿದೆ. ಈ ವರದಿ ಪ್ರಕಾರ, ರಾಮನಗರ ಹಾಗೂ ಮಂಡ್ಯ ವೈದ್ಯ ವ್ಯವಸ್ಥೆಯಲ್ಲಿ ರಾಜಕೀಯ ಪ್ರಭಾವ ಬಹಳ ಗಾಢವಾಗಿದೆ. ಈ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಸ್ಕ್ಯಾನಿಂಗ್ ಸೆಂಟರ್ ಗಳು, ಖಾಸಗಿ ಆಸ್ಪತ್ರೆಗಳು ರಾಜಕೀಯ ಹಿನ್ನೆಲೆಯುಳ್ಳ ಪ್ರಭಾವಿ ವ್ಯಕ್ತಿಗಳಿಗೆ ಸೇರಿವೆ ಎಂದು ವರದಿ ಹೇಳುತ್ತದೆ.

ವೈದ್ಯರ ಮೇಲೆ ಯಾವುದೇ ದೂರು, ಆರೋಪಗಳು ಕೇಳಿ ಬಂದ ತಕ್ಷಣ ರಾಜಕೀಯ ಪ್ರಭಾವ ಬಳಸಿ ಸ್ಥಳೀಯ ಮಟ್ಟದಲ್ಲೇ ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ. ಇದರಿಂದ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಉಲ್ಲಂಘನೆ ಪ್ರಕರಣಗಳು ವ್ಯಾಪಕವಾಗಿದ್ದು, ಭ್ರೂಣ ಹತ್ಯೆ ತಡೆಗಟ್ಟಬೇಕಿದ್ದ ಜಿಲ್ಲಾಡಳಿತ, ಜಿಲ್ಲಾ ಸಕ್ಷಮ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ವರದಿಯಲ್ಲಿ ರಾಜಕೀಯ ಪ್ರಭಾವದಿಂದಾ ಗಿಯೇ ಈ ಎಲ್ಲಾ ಅಕ್ರಮ ನಡೆಯುತ್ತಿದೆ ಎಂದು ಹೇಳಲಾಗಿದ್ದರೂ, ನಿರ್ದಿಷ್ಟವಾಗಿ ಯಾವುದೇ ರಾಜಕಾರಣಿಯ ಹೆಸರನ್ನು ದಾಖಲಿಸಿಲ್ಲ.

ಲೋಪಗಳೇನು?:

ಹಲವು ಸ್ಕ್ಯಾನಿಂಗ್ ಕೇಂದ್ರ ಗಳಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂಬ ನಾಮಫಲಕಗಳ ಪ್ರದರ್ಶನವೂ ಇಲ್ಲ. ಕಾನೂನಿನ ಪ್ರಕಾರ ಪಾಲಿಸಬೇಕಾದ ನಿಯಮಗಳನ್ನು ಬಹುತೇಕ ಸ್ಕ್ಯಾನಿಂಗ್ ಕೇಂದ್ರಗಳು ಪಾಲನೆ ಮಾಡುತ್ತಿಲ್ಲ. ಫಾರಂ ನಂ. ‘ಎಫ್’ ಅನ್ನು ಕಳುಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‌'ಗಳಿಂದ ಬಂದ ರೆಕಾರ್ಡ್‌ಗಳನ್ನು ಪರಿಶೀಲಿಸದೆ ನಿರ್ಲಕ್ಷಿಸಲಾಗುತ್ತಿದೆ. ಸ್ಕ್ಯಾನಿಂಗ್ ಸೆಂಟರ್‌ಗಳ ನೋಂದಣಿ ಮತ್ತು ಮರು ನೋಂದಣಿ ಪತ್ರ ವಿತರಣೆ ವಿಳಂಬಗೊಂಡಿದೆ.

ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ನಕಲಿ ಪ್ರಮಾಣ ಪತ್ರ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ಅರಿವಿದ್ದರೂ ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿ ಕಾನೂನು ಜರುಗಿಸುವಲ್ಲಿ ವಿಫಲರಾಗಿದ್ದಾರೆ. ಪರಿಣಾಮ ನಕಲಿ ವೈದ್ಯರ ಮೊಬೈಲ್ ಸ್ಕ್ಯಾನಿಂಗ್ ದಂಧೆ  ಹೆಚ್ಚಾಗಿ ನಡೆಯುತ್ತಿದೆ. ಇವು ಅನಧಿಕೃತ ಸ್ಕ್ಯಾನಿಂಗ್ ಸೆಂಟರ್‌ಗಳ ಕಾರ್ಯ ನಿರ್ವಹಣೆಗೆ ರಹದಾರಿಯಾಗಿದೆ.

 

Follow Us:
Download App:
  • android
  • ios