ಮೃತ ಎಂದು ಘೋಷಿಸಿದ ವ್ಯಕ್ತಿ ಮನೆಯಲ್ಲಿ ಎದ್ದು ಕುಳಿತ!
ಮೃತ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಮನೆಯಲ್ಲಿ ಎದ್ದು ಕುಳಿತಾಗ..| ಖಾಸಗಿ ಆಸ್ಪತ್ರೆ ವೈದ್ಯರ ಯಡವಟ್ಟಿಗೆ ಮಣ್ಣಾಗಲಿದ್ದ ಯುವಕ| ರೋಗಿಯನ್ನು ಮೃತ ಎಂದು ಘೋಷಿಸಿ ಯಡವಟ್ಟು ಮಾಡಿದ ವೈದ್ಯರು| ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಿತು ವಿಚಿತ್ರ ಘಟನೆ| ಮೃದೇಹ ಮನೆಗೆ ಕರೆತಂದಾಗ ಎದ್ದು ಕುಳಿತ ಯುವಕ|
ಲಕ್ನೋ(ಜು.02): ಖಾಸಗಿ ಆಸ್ಪತ್ರೆಯಿಂದ ಮೃತ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿಯೋರ್ವ, ಮೃತದೇಹ ಮನೆಗೆ ತಂದಾಗ ಎಚ್ಚೆತ್ತ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಲಕ್ನೋದ ಇಂದಿರಾನಗರದ ಸಿ ಬ್ಲಾಕ್ ನಿವಾಸಿ 20 ವರ್ಷದ ಘರ್ಖನ್, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಬಳಿಕವೂ ಆತನ ಆರೋಗ್ಯದಲ್ಲಿ ಚೇತರಿಕೆ ಕಾಣದೇ ವೈದ್ಯರು ಆತನನ್ನು ಮೃತ ಎಂದು ಘೋಷಿಸಿದ್ದರು.
ಇತ್ತ ಮನೆಯಲ್ಲಿ ಫರ್ಖನ್ ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಫರ್ಖನ್ ಮೃದೇಹ ಮನೆಗೆ ಬಂದ ಕೆಲ ಹೊತ್ತಲ್ಲೇ ಆತ ಎದ್ದು ಕುಳಿತಿರುವ ಘಟನೆ ನಡೆದಿದೆ.
ಕೂಡಲೇ ಆತನನ್ನು ನಗರದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೆಂಟಿಲೇಟರ್ ಅಲಭ್ಯತೆ ಪರಿಣಾಮವಾಗಿ ಆತನನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸದ್ಯ ಫರ್ಖನ್’ಗೆ ವೆಂಟಿಲೇಟರ್ ಅಳವಡಿಸಲಾಗಿದ್ದು, ಆತನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.