ಮುಂಬೈ(ಸೆ.30): ತಾಯಿಯನ್ನು ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕಿದ್ದ ಮಗನೇ ತನ್ನ ಹೆಂಡತಿ ಹಾಗೂ ಮಗಳ ಜೊತೆ ಸೇರಿಕೊಂಡು ವೃದ್ಧ ತಾಯಿಗೆ ವಿಕೃತ ಚಿತ್ರಹಿಂಸೆ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ವೃದ್ಧೆಯ ಮಗ ಸುರೇಂದ್ರ್‌ ವೈದ್‌ ತನ್ನ ತಾಯಿಯನ್ನು ಬೆಡ್‌ಶೀಟ್‌ ಮೂಲಕ ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿ, ಬಳಿಕ ಫ್ಯಾನ್‌ ಅನ್ನು ಸ್ವಿಚ್‌ ಆನ್‌ ಮಾಡುವ ಮೂಲಕ ವಿಚಿತ್ರ ಹಿಂಸೆ ನೀಡುತ್ತಿದ್ದ. ಈ ವಿಡಿಯೋವನ್ನು ಅವರ ಕುಟುಂಬಸ್ಥರೇ ಮೊಬೈಲ್‌'ನಲ್ಲಿ ವಿಡಿಯೋ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಧಾನಾಜಿ ನಲವಾಡೆ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ವೃದ್ಧೆಗೆ ಆಕೆಯ ಮಗ, ಸೊಸೆ ಹಾಗೂ ಮೊಮ್ಮಗಳು ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಳಾದ ಮಗ ಸುರೇಂದ್ರ್‌, ಆತನ ಹೆಂಡತಿ ಬಬಿತಾ ಹಾಗೂ ಮಗಳು ಅಕ್ಷಯಾಳನ್ನು ಬಂಧಿಸಿದ್ದಾರೆ.