ಬೆಂಗಳೂರು[ಜೂ.28]: ಹೆಂಡತಿಯನ್ನು ಗದರಿಸಿ ಇಲ್ಲವೆ ಹೊಡೆದು ಹೆದರಿಸುವ ಸುದ್ದಿಯನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಪತಿರಾಯ ಪತ್ನಿಯನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಬೇರೆಯೆ ತಂತ್ರವನ್ನು ಅನುಸರಿಸಲು ಹೋಗಿ ತನ್ನ ಜೀವಕ್ಕೆ ಗಂಡಾತರ ತಂದುಕೊಂಡಿದ್ದಾನೆ.

ರಾಜಗೋಪಾಲ ಠಾಣಾ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ನಾಗರಾಜ್ ಎಂಬಾತ  ಪತ್ನಿ ಲಲಿತಾ ಎಂಬಾಕೆಯ ಜೊತೆ ನಿನ್ನೆ ರಾತ್ರಿ ಜಗಳವಾಡಿದ್ದಾನೆ. ಗಲಾಟೆ ವಿಪರೀತಕ್ಕೆ ಹೋಗಿತ್ತು. ಇಬ್ಬರು ಮುನಿಸಿಕೊಂಡಿದ್ದರು. 

ಬೆಳಗ್ಗೆ ಪತ್ನಿ ಗಂಡನ ಜೊತೆ ಮಾತನಾಡಿರಲಿಲ್ಲ. ಹೇಗಾದರೂ ಮಾಡಿ ಹೆಂಡತಿಯನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳಬೇಕೆಂದು ಎದರಿಸುವ ಸಲುವಾಗಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಾನೆ. ಬೆಂಕಿ ಕಡ್ಡಿ ಕೈಯಲ್ಲಿ ಹಿಡಿದುಕೊಂಡು ಸಾಯ್ತಿನಿ ಎಂದಿದ್ದಾನೆ. ಆದರೆ ಪತ್ನಿ ಇದ್ಯಾವುದಕ್ಕೂ ಜಗ್ಗಲಿಲ್ಲ.

ಆಕಸ್ಮಿಕವಾಗಿ ಬೆಂಕಿಕಡ್ಡಿ ದೇಹಕ್ಕೆ ತಗುಲಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ದೇಹಕ್ಕೆ ಆವರಿಸಿ ಶೇ.90 ಸುಟ್ಟುಕೊಂಡಿದೆ. ಸದ್ಯ ಆಸ್ಪತ್ರೆಯಲ್ಲಿರುವ ನಾಗರಾಜ್ ಪರಿಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.