ಹಣಕ್ಕಾಗಿ ಇಂತಹ ನೀಚ ಕೃತ್ಯ ಮಾಡೋದಾ? 

ಹುಬ್ಬಳ್ಳಿ, ಅ.11: ಜೀವವಿಮೆ ಹಣ ಪಡೆಯುವ ಸಲುವಾಗಿ ಅಮಾಯಕನೊಬ್ಬನನ್ನು ಗೆಳೆಯರೊಂದಿಗೆ ಸೇರಿ ಕೊಂದಿದ್ದ ವ್ಯಕ್ತಿಯೊಬ್ಬ ಆ ಶವ ತನ್ನದೇ ಎಂದು ಬಿಂಬಿಸಲು ಹೊರಟು ಸಿಕ್ಕಿಬಿದ್ದ ಸಿನಿಮೀಯ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದಲ್ಲಿ ನಡೆದಿದೆ. 

ಆರೋಪಿಯ ಕೈಯಲ್ಲಿದ್ದ ಶ್ರೀರಾಮನ ಹಚ್ಚೆಯೇ ಕೊಲೆ ರಹಸ್ಯವನ್ನು ಭೇದಿಸಲು ಸುಳಿವನ್ನು ನೀಡಿದೆ. ಕೊಲೆಯಾದ ವ್ಯಕ್ತಿಯನ್ನು ಇರ್ಫಾನ್‌ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಅಮೀರ್‌ ಶೇಖ್‌ ಮತ್ತು ಮಹಾಂತೇಶ ದುಗ್ಗಾಣಿ ಎಂಬಿಬ್ಬರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಸಂಜೀವ ಬೆಂಗೇರಿ ತಲೆಮರೆಸಿಕೊಂಡಿದ್ದಾನೆ.

ಸಂಜೀವ ಬೆಂಗೇರಿ ಎಚ್‌ಡಿಎಫ್‌ಸಿ ಕಂಪನಿಯಲ್ಲಿ . 50 ಲಕ್ಷ ಮೌಲ್ಯದ ವಿಮೆ ಮಾಡಿಸಿದ್ದ. ಅದನ್ನು ಪಡೆಯುವ ಸಲುವಾಗಿ ಮಹಾಂತೇಶ ದುಗ್ಗಾಣಿ ಮತ್ತು ಅಮೀರ್‌ ಶೇಖ್‌ ಎಂಬಿಬ್ಬರ ನೆರವು ಪಡೆದ ಸಂಜೀವ ಇತ್ತೀಚೆಗಷ್ಟೇ ಗ್ರಾಮಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕ ಇರ್ಫಾನ್‌ ಎಂಬಾತನನ್ನು ಗುರಿಯಾಗಿರಿಸಿದ್ದ. 

ಮಂಗಳವಾರ ರಾತ್ರಿ ಈ ಮೂವರು ಸೇರಿ ಇರ್ಫಾನ್‌ನನ್ನು ಪುಸಲಾಯಿಸಿ ಊರ ಹೊರಗಿನ ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತನಿಗೆ ಸಂಜೀವ ಬೆಂಗೇರಿ ಧರಿಸಿದ್ದ ಬಟ್ಟೆಯನ್ನು ಹಾಕಿ ಮುಖ ಸಹ ಗುರುತು ಸಿಗದಂತೆ ಕೊಲೆ ಮಾಡಿ ಮೃತದೇಹವನ್ನು ರೇವಡಿಹಾಳದ ಸೇತುವೆ ಬಳಿ ಬಿಸಾಕಿದ್ದಾರೆ. 

ಅಲ್ಲಿಂದ ಸಂಜೀವ ಬೆಂಗೇರಿ ಪರಾರಿಯಾಗಿದ್ದು ಉಳಿದಿಬ್ಬರು ಗ್ರಾಮಕ್ಕೆ ಮರಳಿದ್ದಾರೆ. ರೇವಡಿಹಾಳ ಸೇತುವೆ ಬಳಿ ಸಿಕ್ಕ ಮೃತದೇಹವನ್ನು ಪರಿಶೀಲಿಸುವ ಸಂದರ್ಭದಲ್ಲಿ ಸಂಜೀವ ಬೆಂಗೇರಿಯ ಸಹೋದರ ಈ ಶವ ತನ್ನ ತಮ್ಮನನ್ನೇ ಹೋಲುತ್ತಿದೆ. 

ಆದರೆ ಆತನ ಕೈಯಲ್ಲಿ ‘ಜೈ ಶ್ರೀರಾಮ’ ಎಂಬ ಹಚ್ಚೆ ಇತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮೃತದೇಹದ ಮೇಲೆ ಹಚ್ಚೆ ಇರಲಿಲ್ಲ. ಕೂಲಂಕಷವಾಗಿ ಪರಿಶೀಲಿಸಿದಾಗ ಮೃತಪಟ್ಟಿದ್ದು ಒಬ್ಬ ಮುಸ್ಲಿಂ ಯುವಕ ಎಂಬುದು ಪತ್ತೆಯಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.