ಬೆಂಗಳೂರು :  ಜಲಮಂಡಳಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ದಲಿತ ಹೋರಾಟಗಾರ ಪರಶಿವಮೂರ್ತಿ ಚಿಕಿತ್ಸೆ ವೆಚ್ಚ ಭರಿಸಲಾಗದೆ ಪರಿತಪಿಸುತ್ತಿದ್ದಾರೆ. ಜಲಮಂಡಳಿ ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ, ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಿ ತಿರುಗಿಯೂ ನೋಡುತ್ತಿಲ್ಲ ಎಂದು ಅವರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಸೋಮವಾರ ಗಾಂಧಿ ನಗರದ ಕಾನಿಷ್ಕ ಹೋಟೆಲ್‌ ಬಳಿ ಬರುವಾಗ ಗುತ್ತಿಗೆದಾರರು ಮುಚ್ಚದೆ ಹಾಗೇ ಬಿಟ್ಟಿದ್ದ ಮ್ಯಾನ್‌ಹೋಲ್‌ಗೆ ಕಾಲುಜಾರಿ ಬಿದ್ದ ಪರಶಿವಮೂರ್ತಿ ಅವರ ಕಾಲು ಮುರಿದಿತ್ತು. ಹತ್ತು ಅಡಿ ಮ್ಯಾನ್‌ಹೋಲ್‌ನಲ್ಲಿ ಬಿದ್ದು ನರಳಾಡುತ್ತಿದ್ದ ಅವರನ್ನು ಸ್ಥಳೀಯರು ಏಣಿಯ ಸಹಾಯದಿಂದ ಮೇಲೆತ್ತಿ ಶೇಷಾದ್ರಿಪುರ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರಸ್ತುತ ಪರಶಿವಮೂರ್ತಿ ಅವರಿಗೆ ತೊಡೆ ಭಾಗದ ಮೂಳೆ ಮುರಿದಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬೆನ್ನುಮೂಳೆಗೆ ಕೂಡ ಹೊಡೆತ ಬಿದ್ದಿದೆ. ಘಟನೆ ನಡೆದ ದಿನ ಬಂದು ಆಸ್ಪತ್ರೆಗೆ ಒಂದು ಲಕ್ಷ ರು. ಕಟ್ಟಿದ್ದ ಗುತ್ತಿಗೆದಾರ ನಂತರ ತಿರುಗಿಯೂ ನೋಡಿಲ್ಲ. ಚಿಕಿತ್ಸಾ ವೆಚ್ಚ ಏರುತ್ತಿದೆ. ಆಸ್ಪತ್ರೆಯವರು ಹಣ ಕಟ್ಟಿಇಲ್ಲವೇ ಡಿಸ್ಚಾಜ್‌ರ್‍ ಮಾಡಿಕೊಂಡು ಹೋಗಿ ಎನ್ನುತ್ತಿದ್ದಾರೆ. ಜಲಮಂಡಳಿ, ಬಿಬಿಎಂಪಿ ಅಧಿಕಾರಿಗಳು ಕೂಡ ನೆರವಿಗೆ ಬರುತ್ತಿಲ್ಲ ಎಂದು ಪರಶಿವಮೂರ್ತಿ ಅವರ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.