ದ್ವಿಚಕ್ರ ವಾಹನ ತಾಗಿಸಿದ್ದನ್ನು ಪ್ರಶ್ನಿಸಿದ ಮಹಿಳೆಗೆ ಕಿಡಿಗೇಡಿಯೊಬ್ಬ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು : ದ್ವಿಚಕ್ರ ವಾಹನ ತಾಗಿಸಿದ್ದನ್ನು ಪ್ರಶ್ನಿಸಿದ ಮಹಿಳೆಗೆ ಪೆಟ್ರೋಲ್ ಬಂಕ್‌ನಲ್ಲಿ ಕಿಡಿಗೇಡಿಯೊಬ್ಬ ಕಾಲಿನಿಂದ ಒದ್ದು ಹಲ್ಲೆ ನಡೆಸಿ ಗೂಂಡಾವರ್ತನೆ ತೋರಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಹಲ್ಲೆಗೊಳಗಾದ ಕಮಲಾನಗರದ ನಿವಾಸಿ ಶೋಭಾ (34) ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಯ ಬೈಕ್ ಪತ್ತೆ ಹಚ್ಚಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಶೋಭಾ ಅವರು ಪೆಟ್ರೋಲ್ ಹಾಕಿಸಿಕೊಳ್ಳಲು ಜ.3ರಂದು ರಾತ್ರಿ 8.15ರ ಸುಮಾರಿಗೆ ಬಸವೇಶ್ವರನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿರುವ ಎಚ್‌ಪಿ ಪೆಟ್ರೋಲ್ ಬಂಕ್‌ಗೆ ಬಂದಿದ್ದರು. ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸುವ ವೇಳೆ ಹಿಂದಿನಿಂದ ಬಂದ ಡಿಯೋ ದ್ವಿಚಕ್ರ ವಾಹನ ಸವಾರ (ಕೆಎ02ಜೆಎಂ 3304) ಮಹಿಳೆಯ ವಾಹನಕ್ಕೆ ಗುದ್ದಿಸಿ ಡ್ಯಾಮೇಜ್ ಮಾಡಿದ್ದ.
ಆರೋಪಿಯನ್ನು ಶೋಭಾ ಪ್ರಶ್ನಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಆರೋಪಿ ಅಲ್ಲಿಯೇ ಇದ್ದ ವಸ್ತು ತೆಗೆದು ಮಹಿಳೆ ಮೇಲೆ ಹಲ್ಲೆಗೆ ಮುಂದಾದ. ಈ ವೇಳೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಬಂದು ಆರೋಪಿಯನ್ನು ತಡೆದಿದ್ದಾರೆ. ನಂತರ ಪೆಟ್ರೋಲ್ ಬಂಕ್ ಸಿಬ್ಬಂದಿ ಸಮಾಧಾನ ಮಾಡಿ ಆತನನ್ನು ಪಕ್ಕಕ್ಕೆ ಕಳುಹಿಸಿದ್ದರು. ಆರೋಪಿ ಜತೆ ಪತ್ನಿ ಕೂಡ ಅಲ್ಲಿಯೇ ಇದ್ದಳು. ದ್ವಿಚಕ್ರ ವಾಹನದಲ್ಲಿ ಸ್ವಲ್ಪ ಮುಂದಕ್ಕೆ ಹೋದ ಆರೋಪಿ ಮಹಿಳೆಯನ್ನು ಪುನಃ ಕೆಟ್ಟಶಬ್ದದಿಂದ ನಿಂದಿಸಿದ್ದ. ಇದಕ್ಕೆ ಮಹಿಳೆ ಆ ಪದವನ್ನು ‘ನಿನ್ನ ಪತ್ನಿಗೆ ಹೇಳು’ ಎಂದು ಜೋರಾಗಿ ಕೂಗಿ ಹೇಳಿದ್ದರು.
ಆರೋಪಿಯ ಪತ್ನಿ ದ್ವಿಚಕ್ರ ವಾಹನದಿಂದ ಇಳಿದು ಬಂದು ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದರು. ಅಷ್ಟೊತ್ತಿಗೆ ಮಧ್ಯ ಪ್ರವೇಶಿಸಿದ ಆರೋಪಿ ಮಹಿಳೆಯ ಹೊಟ್ಟೆಗೆ ಕಾಲಿನಿಂದ ಒದ್ದು, ಕೈ ನುಣುಚಿ ಗುಂಡಾವರ್ತನೆ ತೋರಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹಲ್ಲೆಗೊಳಗಾದ ಮಹಿಳೆ ಆರೋಪಿಯ ದ್ವಿಚಕ್ರ ವಾಹನವನ್ನು ಹಿಡಿಯಲು ಮುಂದಾಗಿದ್ದಾರೆ. ಆರೋಪಿ ದ್ವಿಚಕ್ರ ವಾಹನ ನಿಲ್ಲಿಸದೆ ಸ್ಥಳದಿಂದ ಪಾರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿ ಗೂಂಡಾವರ್ತನೆ ತೋರಿರುವ ದೃಶ್ಯಾವಳಿಗಳು ಪೆಟ್ರೋಲ್ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಯಾರು ಎಂದು ಪತ್ತೆ ಹಚ್ಚಲಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ತನಿಖಾಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 7, 2019, 10:31 AM IST