ಬೆಂಗಳೂರು : ತಾನು ಬಾಡಿಗೆ ಪಡೆದ ಫ್ಲ್ಯಾಟ್‌ಗಳಿಗೆ ತಾನೇ ಮಾಲೀಕನೆಂದು ಹೇಳಿಕೊಂಡು ಬೇರೊಬ್ಬರಿಗೆ ಬಾಡಿಗೆ ಕೊಟ್ಟು ವಂಚಿಸುತ್ತಿದ್ದ ಚಾಲಾಕಿ ಮೋಸಗಾರನೊಬ್ಬ ಮಾರತ್ತಹಳ್ಳಿ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾನೆ.

ಬಿಟಿಎಂ ಲೇಔಟ್‌ ನಿವಾಸಿ ಮೊಹಮದ್‌ ಅಬ್ದುಲ್‌ ರಹೀಂ ಬಂಧಿತನಾಗಿದ್ದು, ಆರೋಪಿಯಿಂದ ಹಣ ಹಾಗೂ ನಕಲಿ ದಾಖಲೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲ ತಿಂಗಳ ಹಿಂದೆ ಮುನೇಕೊಳಲು ನಿವಾಸಿ ಜಗನ್ನಾಥ್‌ ಎಂಬುವವರಿಂದ ಫ್ಲ್ಯಾಟ್‌ ಬಾಡಿಗೆ ಪಡೆದ ರಹೀಂ, ಆ ನಂತರ ಆ ಫ್ಲ್ಯಾಟ್‌ಅನ್ನು ಅಧಿಕ ದರಕ್ಕೆ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಳಿಗೆ ಬಾಡಿಗೆ ಕೊಟ್ಟಿದ್ದ. ಬಾಡಿಗೆ ಪಡೆಯಲು ತೆರಳಿದ್ದಾಗ ಜಗನ್ನಾಥ್‌ ಅವರಿಗೆ ಈ ಭಾನಗಡಿ ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಮೊಹಮದ್‌ ಅಬ್ದುಲ್‌ ರಹೀಂ ಮೂಲತಃ ಆಂಧ್ರಪ್ರದೇಶವನಾಗಿದ್ದು, 15 ವರ್ಷಗಳ ಹಿಂದೆ ನಗರಕ್ಕೆ ಬಂದು ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದ. ಫ್ಲ್ಯಾಟ್‌ಗಳನ್ನು ಬಾಡಿಗೆ ಪಡೆದು ವಂಚಿಸುತ್ತಿದ್ದ. 2017ರಿಂದ ಈ ದಂಧೆಯಲ್ಲಿ ಆತ ತೊಡಗಿದ್ದು, ಇದುವರೆಗೆ ಎಂಟು ಮಂದಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ 20 ಲಕ್ಷ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಾರತ್ತಹಳ್ಳಿ ಸುತ್ತಮುತ್ತಲ ಅಪಾರ್ಟ್‌ಮೆಂಟ್‌ ಸಮುಚ್ಛಯಗಳ ಬಳಿ ಹೋಗುತ್ತಿದ್ದ ರಹೀಂ, ನಾನು ಸ್ಕಿಲ್‌ ಡೆವಲಪ್‌ಮೆಂಟ್‌ ತರಬೇತುದಾರನಾಗಿದ್ದಾನೆ. ನನಗೆ ಎರಡು ತಿಂಗಳ ಮಟ್ಟಿಗೆ ಫ್ಲ್ಯಾಟ್‌ ಬಾಡಿಗೆ ಬೇಕು ಎಂದು ಮಾಲೀಕರಿಗೆ ಹೇಳಿ ಬಾಡಿಗೆ ಪಡೆದುಕೊಳ್ಳುತ್ತಿದ್ದ. ನಂತರ ಆ ಫ್ಲ್ಯಾಟ್‌ಗೆ ತಾನೇ ಮಾಲೀಕನೆಂದು ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ನಂಬಿಸುತ್ತಿದ್ದ.

ಫ್ಲ್ಯಾಟ್‌ ಬಾಡಿಗೆ ಪಡೆದ ಬಳಿಕ ಆರೋಪಿ, ಅದರ ಕೊಠಡಿಗಳ ಫೋಟೋಗಳನ್ನು ತೆಗೆದು ವೆಬ್‌ ಸೈಟ್‌ಗಳಲ್ಲಿ ಹಾಕುತ್ತಿದ್ದ. ಅದರಲ್ಲಿ ‘ನಾನು ಅಪಾರ್ಟ್‌ಮೆಂಟ್‌ ಮಾಲೀಕ. ಕಡಿಮೆ ಬೆಲೆಗೆ ಫ್ಲ್ಯಾಟ್‌ಗಳು ಬಾಡಿಗೆಗೆ ಇವೆ’ ಎಂದು ಜಾಹೀರಾತು ಪ್ರಕಟಿಸುತ್ತಿದ್ದ. ಸಂಪರ್ಕಕ್ಕೆ ತನ್ನ ಮೊಬೈಲ್‌ ಸಂಖ್ಯೆಯನ್ನೂ ಹಾಕಿರುತ್ತಿದ್ದ. ಅದನ್ನು ನೋಡಿ ಕರೆ ಮಾಡುತ್ತಿದ್ದವರನ್ನು ಕರೆಸಿಕೊಂಡು ಫ್ಲ್ಯಾಟ್‌ ತೋರಿಸುತ್ತಿದ್ದ ಆರೋಪಿ, ಮುಂಗಡವಾಗಿ 3 ಲಕ್ಷ ಪಡೆದುಕೊಂಡು ತಿಂಗಳ ನಂತರ ಫ್ಲ್ಯಾಟ್‌ಗೆ ಬರುವಂತೆ ಹೇಳಿ ಕಳುಹಿಸುತ್ತಿದ್ದ. ಇದೇ ರೀತಿ ಒಂದೇ ಫ್ಲ್ಯಾಟ್‌ ಅನ್ನು ಹಲವರಿಗೆ ತೋರಿಸಿ ಟೋಪಿ ಹಾಕುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೇಗೆ ಸಿಕ್ಕಿಬಿದ್ದ:

ರಹೀಂ ವಿರುದ್ಧ ಮಾರತ್‌ಹಳ್ಳಿ, ಎಚ್‌ಎಎಲ್‌ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆದರೆ ಆರೋಪಿಯ ಫೋಟೋ ಹಾಗೂ ಮೊಬೈಲ್‌ ಸಂಖ್ಯೆ ಇದ್ದರೂ ಸಹ ಆತ ಪೊಲೀಸರ ಕೈಗೆ ಸಿಗದೆ ಚಳ್ಳೇ ಹಣ್ಣು ತಿನ್ನಿಸುತ್ತಿದ್ದ. ಕೊನೆಗೆ ಸತತ ಪ್ರಯತ್ನದ ಫಲ ರಹೀಂನನ್ನು ಸೆರೆ ಹಿಡಿಯುವಲ್ಲಿ ಮಾರತ್ತಹಳ್ಳಿ ಪೊಲೀಸರು ಯಶಸ್ಸು ಕಂಡಿದ್ದಾರೆ.

2018ರ ಆಗಸ್ಟ್‌ನಲ್ಲಿ ಎಚ್‌.ಬಿ.ಜಗನ್ನಾಥ್‌ ಎಂಬುವರಿಗೆ ಮುನೇಕೊಳಲು ಸಮೀಪ ಸೇರಿದ ಫ್ಲ್ಯಾಟ್‌ ಅನ್ನು ರಹೀಂ ಬಾಡಿಗೆ ಪಡೆದಿದ್ದ. ಬಳಿಕ ಆ ಫ್ಲ್ಯಾಟ್‌ ಅನ್ನು ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳಿಗೆ ಬಾಡಿಗೆ ಕೊಟ್ಟು ಮುಂಗಡವಾಗಿ ಹಣ ಪಡೆದಿದ್ದ. ನವೆಂಬರ್‌ನಲ್ಲಿ ಅವರು ಬಾಡಿಗೆ ಕೇಳಲು ಫ್ಲ್ಯಾಟ್‌ ಬಳಿ ಹೋದಾಗ ನಾಲ್ವರು ಯುವಕರು ಆ ಫ್ಲ್ಯಾಟ್‌ನಲ್ಲಿದ್ದರು. ಅವರನ್ನು ವಿಚಾರಿಸಿದಾಗ ರಹೀಂ ಎಂಬುವರಿಗೆ 2 ಲಕ್ಷ ಮುಂಗಡ ಕೊಟ್ಟು ಫ್ಲ್ಯಾಟ್‌ಗೆ ಬಾಡಿಗೆ ಬಂದಿದ್ದೇವೆ. ಈಗಾಗಲೇ ತಿಂಗಳಿಗೆ 40 ಸಾವಿರದಂತೆ ಮೂರು ತಿಂಗಳ ಬಾಡಿಗೆಯನ್ನು ಕೊಟ್ಟಿದ್ದೇವೆ ಎಂದು ಹೇಳಿದ್ದರು. ಈ ವಿಚಾರ ತಿಳಿದು ಗಾಬರಿಗೊಂಡ ಮಾಲೀಕರು, ಕೂಡಲೇ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು. ಬಳಿಕ ಮೊಬೈಲ್‌ ಸಂಖ್ಯೆಗಳ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ವಂಚನೆಗೆ ನಾನಾ ವೇಷ

ತನ್ನ ಮೋಸದ ಕೃತ್ಯವು ಗೊತ್ತಾಗದಂತೆ ಎಚ್ಚರಿಕೆ ವಹಿಸಿದ್ದ ರಹೀಂ, ತನ್ನೊಂದಿಗೆ ವ್ಯವಹರಿಸಿದ ಪ್ರತಿಯೊಬ್ಬರಿಗೆ ಬೇರೆ ಬೇರೆ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ.

ರಹೀಂ, ರಾಹುಲ್‌ ರಾಹಿಲ್‌, ಎಂ.ಎ.ಆರ್‌.ನೌಮನ್‌ ಸಲ್ಮಾನ್‌, ಎಂ.ಎಂ.ಆರ್‌.ಸಾರಿಕ್‌, ರಾಕೀಬ್‌, ರಿಶಾನ್‌, ಫೈಝಿ ಹಾಗೂ ಯಾಸಿರ್‌ ಎಂಬ ಹೆಸರಿನಲ್ಲಿ ಜನರನ್ನು ಮೋಸದ ಬಲೆಗೆ ಬೀಳಿಸಿಕೊಂಡು ಪಂಗನಾಮ ಹಾಕಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.