ನವದೆಹಲಿ[ಅ.12]: ಪ್ರೇಮ ನಗರ ಠಾಣೆಯಲ್ಲಿ ವ್ಯಕ್ತಿಯೊಬ್ಬ ಫೇಸ್ ಬುಕ್ ಲೈವ್ ಮಾಡ್ತಾ ತನಗೇ ತಾನು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ಯುವಕನನ್ನು ಆಶೂ ಆರ್ಯ ಎಂದು ಗುರುತಿಸಲಾಗಿದ್ದು, ಸದ್ಯ ಈತನ ಸ್ಥಿತಿ ಗಂಭೀರವಾಗಿದೆ.

ದಸರಾದಂದು ತನ್ನ ತಂದೆ ಯಾದ್ ರಾಮ್ ರನ್ನು ಅಮರ್ ದೀಪ್ ಡಬಾಸ್, ರಾಜೇಂದ್ರ ಹಾಗೂ ಹರ್ದೀಪ್ ಡಬಾಸ್ ಎಂಬವರು ತೀವ್ರವಾಗಿ ಥಳಿಸಿದ್ದರು. ತನ್ನ ತಂದೆ ನಡೆದುಕೊಂಡು ಹೋಗುವಾಗ, ಕೈ ತಾಗಿ ಈ ಮೂವರಲ್ಲಿ ಒಬ್ಬಾತನ ಮೊಬೈಲ್ ಕೆಳ ಬಿದ್ದಿತ್ತು. ಇದೇ ವಿಚಾರವಾಗಿ ಅವರು ತನ್ನ ತಂದೆಯನ್ನು ಥಳಿಸಿದ್ದರು. ಇದಾದ ಬಳಿಕ ತಾನು ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣದ ತನಿಖೆ ನಡೆಸಲು ಹೆಡ್ ಕಾನ್ಸ್ಟೇಬಲ್ ಸಂದೀಪ್ ಎಂಬವರಿಗೆ ವಹಿಸಲಾಗಿತ್ತು. ಆದರೆ ಅವರು ತನಿಖೆ ನಡೆಸದೇ ಸತಾಯಿಸುತ್ತಿದ್ದರು. ಎರಡು ದಿನದಿಂದ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎಂಬುವುದು ಆಶೂ ಮಾತಾಗಿದೆ.

ಹೀಗಿರುವಾಗ ಅತ್ತ ಆರೋಪಿಗಳು ಬೆದರಿಕೆ ನೀಡಲಾರಂಭಿಸಿದ್ದರು. ಹೀಗಾಗಿ ಆಶೂ ಬೆಂಕಿ ಹಚ್ಚಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆಶೂರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಮುಖ್ಯ ಪೇದೆ ಸಂದೀಪ್ ಎರಡು ದಿನಗಳ ಹಿಂದೆ ಅಪಘಾತಕ್ಕೊಳಗಾಗಿದ್ದು, ಗಾಯಗೊಂಡಿದ್ದರು. ಹೀಗಾಗಿ ಅವರು ಆಶೂ ಕರೆ ಸ್ವೀಕರಿಸಿರಲಿಲ್ಲ ಎಂಬುವುದು ಪೊಲೀಸರ ಮಾತಾಗಿದೆ.

ಅದೇನಿದ್ದರೂ ಪೊಲೀಸ್ ಠಾಣೆಯೊಳಗೊಬ್ಬ ವ್ಯಕ್ತಿ ಬಹಳಷ್ಟು ಸಮಯ Facebook ಲೈವ್ ಮಾಡಿದ್ದು, ಬಳಿಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿದರೂ ಪೊಲೀಸ್ ಸಿಬ್ಬಂದಿ ಏನು ಮಾಡುತ್ತಿದ್ದರು? ಎಂಬ ಪ್ರಶ್ನೆಗೆ ಉತ್ತರ ನಿಗೂಢ.