ಕೇರಳ ಸಿಎಂ ಪಿಣರಾಯಿ ವಿಜಯನ್ ಹಲ್ಲೆ ಯತ್ನ! ದೆಹಲಿಯ ಕೇರಳ ಹೌಸ್‌ನಲ್ಲಿ ಘಟನೆ! ಸಿಎಂ ಅವರತ್ತ ಚಾಕು ಹಿಡಿದು ನುಗ್ಗಿದ ಆಗುಂತಕ! ಆಗುಂತಕನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ
ನವದೆಹಲಿ[ಆ.೪]: ದೆಹಲಿಯ ಕೇರಳ ಹೌಸ್‌ನಲ್ಲಿ ಸಿಎಂ ಪಿಣರಾಯಿ ವಿಜಯನ್ ಮೇಲೆ ಹಲ್ಲೆ ಯತ್ನ ನಡೆದಿದೆ. ಪಿಣರಾಯಿ ವಿಜಯನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಹಿಡಿದುಕೊಂಡು ನುಗ್ಗಲು ಯತ್ನಿಸಿದ್ದು, ಭದ್ರತಾ ಸಿಬ್ಬಂದಿ ಆತನನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಿಣರಾಯಿ ವಿಜಯನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ವಿಮಲ್ ಕುಮಾರ್ ಎಂಬಾತ ಚಾಕು ಹಿಡಿದು ಸಿಎಂ ಅವರತ್ತ ನುಗ್ಗಲು ಯತ್ನಿಸಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡು ಚಾಕು ಕಸಿದುಕೊಂಡಿದ್ದಾರೆ. ಆತ ಸಿಎಂ ಮುಂದೆ ಆತ್ಮಹತ್ಯೆ ಯತ್ನ ಮಾಡಲು ಬಂದಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಆರ್ ಎಸ್ ಎಸ್ ನಾಯಕರೊಬ್ಬರಿಂದ ಜೀವ ಬೆದರಿಕೆ ಬಂದಿತ್ತು. ಪಿಣರಾಯಿ ತಲೆ ಕತ್ತರಿಸುವವರಿಗೆ 1 ಕೋಟಿ ರು ಇನಾಮು ಕೊಡುವುದಾಗಿ ಘೋಷಿಸಿದ್ದರು. ಇನ್ನು ಪಿಣರಾಯಿ ಮೇಲಿನ ಹಲ್ಲೆ ಯತ್ನ ಖಂಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಹಿಂಸೆಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ದೇಶಕ್ಕೆ ರವಾನಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
